ಗ್ಲ್ಯಾಸ್ಗೋ,ಜು. 27 (DaijiworldNews/AK): ಕಾಮನ್ವೆಲ್ತ್ ಗೇಮ್ಸ್ 2026ರ ಪುರುಷರ 65 ಕೆಜಿ ವಿಭಾಗದ ವೇಟ್ಲಿಫ್ಟಿಂಗ್ನಲ್ಲಿ ಭಾರತದ ರಾಜ ಮುತ್ತುಪಾಂಡಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಪಂದ್ಯಾವಳಿಯ 4ನೇ ದಿನದಂದು ರಾಜ ಮುತ್ತುಪಾಂಡಿ ಒಟ್ಟು 286 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಸ್ನ್ಯಾಚ್ ವಿಭಾಗದಲ್ಲಿ 126 ಕೆಜಿ ಹಾಗೂ ಕ್ಲೀನ್ ಅಂಡ್ ಜೆರ್ಕ್ ವಿಭಾಗದಲ್ಲಿ 160 ಕೆಜಿ ಭಾರವನ್ನು ಅವರು ಯಶಸ್ವಿಯಾಗಿ ಎತ್ತಿದರು. ಪ್ರಸಕ್ತ ಗ್ಲ್ಯಾಸ್ಗೋ ಕಾಮನ್ವೆಲ್ತ್ ಕೂಟದಲ್ಲಿ ಭಾರತಕ್ಕೆ ಸಿಕ್ಕ ಎರಡನೇ ಬೆಳ್ಳಿ ಪದಕ ಇದಾಗಿದ್ದು, ಭಾರತದ ಒಟ್ಟು ಪದಕಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ವೇಟ್ಲಿಫ್ಟಿಂಗ್ ಒಂದರಲ್ಲೇ ಭಾರತಕ್ಕೆ ಸಿಕ್ಕ 3ನೇ ಪದಕ ಇದಾಗಿದೆ.
ಮಲೇಷ್ಯಾದ ಮುಹಮ್ಮದ್ ಅಜ್ನಿಲ್ ಬಿದಿನ್ ಒಟ್ಟು 299 ಕೆಜಿ ಭಾರ ಎತ್ತುವ ಮೂಲಕ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, ಪಪುವಾ ನ್ಯೂ ಗಿನಿಯಾದ ಮೊರಿಯಾ ಬಾರು 282 ಕೆಜಿ ಎತ್ತಿ ಕಂಚಿನ ಪದಕ ಪಡೆದರು.
ತಮಿಳುನಾಡಿನ ಕೋವಿಲ್ಪಟ್ಟಿ ಮೂಲದ 27 ವರ್ಷದ ರಾಜ ಮುತ್ತುಪಾಂಡಿ, 2018ರ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ಮೂಲಕ ಪಾದಾರ್ಪಣೆ ಮಾಡಿ 62 ಕೆಜಿ ವಿಭಾಗದಲ್ಲಿ 6ನೇ ಸ್ಥಾನ ಪಡೆದಿದ್ದರು. 2019ರ ಕಾಮನ್ವೆಲ್ತ್ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ ವೇಳೆ ಮೊಣಕೈ ನೋವಿಗೆ ತುತ್ತಾಗಿದ್ದರು
ಹಠ ಬಿಡದೇ ಕಂಬ್ಯಾಕ್ ಮಾಡಿದ ಅವರು ರಾಷ್ಟ್ರೀಯ ಚಾಂಪಿಯನ್ಷಿಪ್ ಗೆದ್ದು, 2025ರ ವಿಶ್ವ ಚಾಂಪಿಯನ್ಷಿಪ್ನಲ್ಲಿ 9ನೇ ಸ್ಥಾನ ಪಡೆದುಕೊಂಡಿದ್ದರು. ಇದೀಗ ಈ ಬೆಳ್ಳಿ ಪದಕವು ಅವರ ಕ್ರೀಡಾ ಜೀವನದ ದೊಡ್ಡ ಸಾಧನೆಯಾಗಿದೆ.
1 ಚಿನ್ನ, 2 ಬೆಳ್ಳಿ, 1 ಕಂಚಿನ ಪದಕದೊಂದಿಗೆ 4 ಪದಕ ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.