ಮೈಸೂರು, ಜು. 30 (DaijiworldNews/TA): ದೈಹಿಕ ಮಿತಿ ಸಾಧನೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕಂಚಗಾರಕೊಪ್ಪಲು ಗ್ರಾಮದ ಯುವತಿ ಕೆ.ಎಸ್. ಶಿಲ್ಪಾ ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ್ದಾರೆ. ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಪ್ಯಾರಾ ಅಥ್ಲೆಟಿಕ್ಸ್ ಕ್ರೀಡಾಕೂಟದ ಶಾಟ್ಪುಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು, ಭಾರತ ಹಾಗೂ ಕರ್ನಾಟಕದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ. ಈ ಕ್ರೀಡಾಕೂಟಕ್ಕೆ ಆಯ್ಕೆಯಾದ ಏಕೈಕ ಕನ್ನಡತಿ ಎಂಬ ಹೆಗ್ಗಳಿಕೆಯೂ ಶಿಲ್ಪಾ ಅವರದ್ದಾಗಿದೆ.

ರೈತ ದಂಪತಿ ಶೈಲಾ ಮತ್ತು ಶಾಂತಾ ಅವರ ಪುತ್ರಿಯಾಗಿರುವ ಶಿಲ್ಪಾ ಅವರ ಬದುಕಿನ ಹಾದಿ ಸುಲಭದ್ದಾಗಿರಲಿಲ್ಲ. ಕೇವಲ ನಾಲ್ಕು ವರ್ಷದ ಬಾಲಕಿಯಾಗಿದ್ದಾಗ ಐಸ್ಕ್ರೀಮ್ ಹಿಡಿದು ಮನೆಗೆ ಮರಳುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಎಡಗಾಲನ್ನು ಕಳೆದುಕೊಂಡರು. ಆಘಾತಕಾರಿ ಘಟನೆಯ ನಂತರ ಬದುಕಿನ ಕನಸುಗಳೇ ಕಮರಿಹೋಗುವಂತಹ ಪರಿಸ್ಥಿತಿ ನಿರ್ಮಾಣವಾದರೂ, ಶಿಲ್ಪಾ ಎಂದಿಗೂ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಕೃತಕ ಕಾಲನ್ನೇ ತಮ್ಮ ಹೊಸ ಶಕ್ತಿಯನ್ನಾಗಿ ಮಾಡಿಕೊಂಡು ಬದುಕಿನ ಹೊಸ ಅಧ್ಯಾಯ ಆರಂಭಿಸಿದರು.
ಗ್ರಾಮೀಣ ಪರಿಸರದಲ್ಲಿ ಅನೇಕ ಕಷ್ಟಗಳ ನಡುವೆಯೇ ವಿದ್ಯಾಭ್ಯಾಸ ಮುಂದುವರಿಸಿದ ಶಿಲ್ಪಾ ಸ್ನಾತಕೋತ್ತರ ಪದವಿ ಹಾಗೂ ಬಿ.ಎಡ್ ಪೂರ್ಣಗೊಳಿಸಿ, ಬಳಿಕ ಮೈಸೂರಿನಲ್ಲಿ ಶಿಕ್ಷಕಿಯಾಗಿ ಸೇವೆ ಆರಂಭಿಸಿದರು. ಇದೇ ವೇಳೆ ಬಸ್ ಪ್ರಯಾಣದ ಸಂದರ್ಭದಲ್ಲಿ ಪರಿಚಯವಾದ ಸ್ನೇಹಿತೆ ಗೀತಾ ನೀಡಿದ ಸಲಹೆಯೇ ಅವರ ಬದುಕಿನ ದಿಕ್ಕನ್ನು ಬದಲಿಸಿತು.
2019ರಲ್ಲಿ, ತಮ್ಮ 29ನೇ ವಯಸ್ಸಿನಲ್ಲಿ ಶಿಲ್ಪಾ ಪ್ಯಾರಾ ಕ್ರೀಡಾ ಲೋಕಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಿಟ್ಟಿಂಗ್ ವಾಲಿಬಾಲ್ನಲ್ಲಿ ಆಡಿದ ಅವರು ಕರ್ನಾಟಕ ತಂಡವನ್ನು ನಾಲ್ಕು ಬಾರಿ ಪ್ರತಿನಿಧಿಸಿದರು. ಬಳಿಕ ಕೋಚ್ ರಾಘವೇಂದ್ರ ಅವರ ಸಲಹೆಯಂತೆ ಶಾಟ್ಪುಟ್ ಹಾಗೂ ಡಿಸ್ಕಸ್ ಥ್ರೋ ವಿಭಾಗದಲ್ಲಿ ತರಬೇತಿ ಆರಂಭಿಸಿದರು. ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಕೋಚ್ ಎಸ್.ಡಿ. ಈಶಾನ್ ಅವರ ಮಾರ್ಗದರ್ಶನದಲ್ಲಿ ಕಠಿಣ ಅಭ್ಯಾಸ ನಡೆಸಿದ ಶಿಲ್ಪಾ, ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ತಮ್ಮನ್ನು ತಾವು ಸಜ್ಜುಗೊಳಿಸಿಕೊಂಡರು.
ಕಳೆದ ಒಂದು ವರ್ಷದಿಂದ ನಿರಂತರ ತರಬೇತಿ ಪಡೆದ ಶಿಲ್ಪಾ ಇದೀಗ ಕಾಮನ್ವೆಲ್ತ್ ಪ್ಯಾರಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಅವರ ಈ ಸಾಧನೆ ಗ್ರಾಮೀಣ ಯುವಜನತೆಗೆ ಮಾತ್ರವಲ್ಲ, ವಿಶೇಷಚೇತನ ಕ್ರೀಡಾಪಟುಗಳಿಗೂ ಹೊಸ ಆತ್ಮವಿಶ್ವಾಸ ತುಂಬಿದೆ. ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಅಚಲ ಸಂಕಲ್ಪದ ಮೂಲಕ ವಿಶ್ವ ವೇದಿಕೆಯಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ ಶಿಲ್ಪಾ ಅವರ ಸಾಧನೆ ಇಡೀ ಕರ್ನಾಟಕಕ್ಕೆ ಹೆಮ್ಮೆಯ ಕ್ಷಣವಾಗಿದೆ. ಮುಂದಿನ ದಿನಗಳಲ್ಲಿ ದೇಶಕ್ಕೆ ಇನ್ನಷ್ಟು ಪದಕಗಳನ್ನು ತಂದುಕೊಡುವ ಭರವಸೆಯೊಂದಿಗೆ ಅವರು ಹೊಸ ಗುರಿಯತ್ತ ಹೆಜ್ಜೆ ಇಟ್ಟಿದ್ದಾರೆ.