ನವದೆಹಲಿ, ಜು. 30 (DaijiworldNews/AK): ಮುಂಬರುವ ಹಾಕಿ ವಿಶ್ವಕಪ್ಗಾಗಿ ಹಾಕಿ ಇಂಡಿಯಾ ರಾಷ್ಟ್ರೀಯ ಪುರುಷ ಮತ್ತು ಮಹಿಳಾ ತಂಡಗಳ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಈ ಬಾರಿ ತಂಡದ ಸಾಂಪ್ರದಾಯಿಕ ನೀಲಿ ಬಣ್ಣವನ್ನು ಬದಲಾಯಿಸಿ ಕೇಸರಿ ಬಣ್ಣದ ಜೆರ್ಸಿಯನ್ನು ಪರಿಚಯಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.


ಕೇಸರಿ ಬಣ್ಣದ ಜೊತೆಗೆ ಭಾರತೀಯ ತಂಡಗಳು ಇದೇ ಹೊಸ ವಿನ್ಯಾಸವನ್ನು ಹೊಂದಿರುವ ಬಿಳಿ ಬಣ್ಣದ ಜೆರ್ಸಿಗಳನ್ನು ಸಹ ತಮ್ಮ ಕಿಟ್ನಲ್ಲಿ ಹೊಂದಿರಲಿವೆ. ಪುರುಷರ ವಿಶ್ವಕಪ್ ಪಂದ್ಯಾವಳಿಯು ಆಗಸ್ಟ್ 14 ರಿಂದ 30 ರವರೆಗೆ ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್ನಲ್ಲಿ ನಡೆಯಲಿದ್ದರೆ, ಮಹಿಳೆಯರ ಸ್ಪರ್ಧೆಯು ಆಗಸ್ಟ್ 15 ರಿಂದ 30 ರವರೆಗೆ ನಡೆಯಲಿದೆ.
ಜೆರ್ಸಿಯ ಬಣ್ಣ ಬದಲಾವಣೆ ಮಾಡಿದ್ದಕ್ಕೆ ಭಾರತ ಹಾಕಿ ತಂಡದ ಮಾಜಿ ನಾಯಕ ವೀರೇನ್ ರಸ್ಕಿನ್ಹಾ ಅಸಮಾಧಾನ ಹೊರಹಾಕಿದ್ದಾರೆ. ಭಾರತೀಯ ಹಾಕಿ ತಂಡದ ಗುರುತು ಮತ್ತು ಪರಂಪರೆಯು ಯಾವಾಗಲೂ ‘ನೀಲಿ’ ಬಣ್ಣದೊಂದಿಗೆ ಬೆಸೆದುಕೊಂಡಿದೆ ಎಂದು ಅವರು ನೆನಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ವೀರೇನ್, ಹಾಕಿ ಇಂಡಿಯಾ ಭಾರತೀಯ ಹಾಕಿಗಾಗಿ ಹಲವು ಉತ್ತಮ ಕೆಲಸಗಳನ್ನು ಮಾಡಿದೆ. ಆದರೆ ಈ ನಿರ್ಧಾರ ಮುಜುಗರ ತಂದಿದೆ. ಭಾರತ ತಂಡದ ಪರಂಪರೆ ಮತ್ತು ಗುರುತು ಯಾವಾಗಲೂ ನೀಲಿ ಬಣ್ಣವೇ ಆಗಿದೆ. ನಾನು ವರ್ಷಗಳ ಕಾಲ ನೀಲಿ ಜೆರ್ಸಿಯನ್ನು ಹೆಮ್ಮೆಯಿಂದ ಧರಿಸಿದ್ದೇನೆ. ಅಭಿಮಾನಿಗಳು ಸಹ ನಮ್ಮ ತಂಡವನ್ನು ನೀಲಿ ಬಣ್ಣದಲ್ಲೇ ನೋಡಲು ಬಯಸುತ್ತಾರೆ. ಇದ್ದಕ್ಕಿದ್ದಂತೆ ಕೇಸರಿ ಬಣ್ಣಕ್ಕೆ ಬದಲಾಯಿಸಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.