ನವದೆಹಲಿ,ಜು. 29 (DaijiworldNews/AK): 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಮೂರು ದೇಶಗಳು ಆತಿಥ್ಯವಹಿಸುತ್ತಿವೆ ಎಂಬುದು ಈ ಹಿಂದೆಯೇ ಖಚಿತವಾಗಿತ್ತು. ಇದೀಗ ಈ ಮೂರು ದೇಶಗಳ ಯಾವ್ಯಾವ ನಗರಗಳು ಈ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಆತಿಥ್ಯವಹಿಸುತ್ತಿವೆ ಎಂಬುದನ್ನು ಐಸಿಸಿ ಇಂದು ಬಹಿರಂಗಪಡಿಸಿದೆ.

ಮುಂದಿನ ಏಕದಿನ ವಿಶ್ವಕಪ್ ಆಫ್ರಿಕಾ ಖಂಡದ ಮೂರು ದೇಶಗಳಾದ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯುತ್ತಿದೆ. ಈ ಮೂರು ದೇಶಗಳ ಒಟ್ಟು 12 ನಗರಗಳಲ್ಲಿ 54 ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಅತಿ ಹೆಚ್ಚು ಪಂದ್ಯಗಳು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿವೆ.
ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿರುವ 12 ಸ್ಥಳಗಳನ್ನು ಬಹಿರಂಗಪಡಿಸಲಾಯಿತು. ಇವುಗಳಲ್ಲಿ, ಜೋಹಾನ್ಸ್ಬರ್ಗ್ ಮತ್ತು ಕೇಪ್ ಟೌನ್ ಸೇರಿದಂತೆ ಎಂಟು ಸ್ಥಳಗಳು ದಕ್ಷಿಣ ಆಫ್ರಿಕಾದಲ್ಲಿದ್ದರೆ, ಜಿಂಬಾಬ್ವೆಯ ಮೂರು ನಗರಗಳು ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುತ್ತವೆ. ನಮೀಬಿಯಾದ ಒಂದು ನಗರದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ.
2027 ರ ವಿಶ್ವಕಪ್ ಅಕ್ಟೋಬರ್ 4 ರಿಂದ ನವೆಂಬರ್ 21, 2027 ರವರೆಗೆ ನಡೆಯುವ ನಿರೀಕ್ಷೆಯಿದೆ. ಈ ಬಾರಿಯ ವಿಶ್ವಕಪ್ನ ವಿಶೇಷತೆ ಏನೆಂದರೆ 24 ವರ್ಷಗಳ ನಂತರ ಪುರುಷರ ಏಕದಿನ ವಿಶ್ವಕಪ್ ಆಫ್ರಿಕಾ ಖಂಡದಲ್ಲಿ ನಡೆಯುತ್ತಿದೆ. ಇದಕ್ಕೂ ಮೊದಲು ಅಂದರೆ 2003 ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ಕೀನ್ಯಾದಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆದಿತ್ತು.
ಫೈನಲ್ ಪಂದ್ಯವು ವಾಂಡರರ್ಸ್ ಅಥವಾ ನ್ಯೂಲ್ಯಾಂಡ್ಸ್ನಲ್ಲಿ ನಡೆಯಲಿದೆ. ಜಿಂಬಾಬ್ವೆಯ ಹರಾರೆ, ಬುಲವಾಯೊ ಮತ್ತು ವಿಕ್ಟೋರಿಯಾ, 7 ರಿಂದ 10 ಪಂದ್ಯಗಳನ್ನು ಆಯೋಜಿಸುತ್ತವೆ. ಉಳಿದಂತೆ ನಮೀಬಿಯಾದ ವಿಂಡ್ಹೋಕ್ ಮೈದಾನದಲ್ಲಿ ಮೂರು ಪಂದ್ಯಗಳು ನಡೆಯಲಿವೆ.