ಮಂಗಳೂರು, ಆ. 02 (DaijiworldNews/TA): ಮಂಗಳೂರಿನ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ (ಎಂಎಂಎ) ಫೈಟರ್ ನಿಖಿಲ್ ಶೆಟ್ಟಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆ ತರುವ ಸಾಧನೆ ಮಾಡಿದ್ದಾರೆ. ಮಲೇಷ್ಯಾದಲ್ಲಿ ನಡೆದ ಗಾಮಾ (GAMMA) ಏಷ್ಯನ್ ಚಾಂಪಿಯನ್ಶಿಪ್–2026ರಲ್ಲಿ ಭಾರತವನ್ನು ಪ್ರತಿನಿಧಿಸಿದ ಅವರು, 74.9 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಉಪಚಾಂಪಿಯನ್ (ರನ್ನರ್-ಅಪ್) ಆಗಿ ಹೊರಹೊಮ್ಮಿದ್ದಾರೆ.


ಏಷ್ಯಾದ ವಿವಿಧ ದೇಶಗಳ ಪ್ರಬಲ ಹವ್ಯಾಸಿ ಎಂಎಂಎ ಸ್ಪರ್ಧಾಳುಗಳ ನಡುವಿನ ತೀವ್ರ ಪೈಪೋಟಿಯಲ್ಲಿ ನಿಖಿಲ್ ಶೆಟ್ಟಿ ಅತ್ಯುತ್ತಮ ಪ್ರದರ್ಶನ ನೀಡಿ ಫೈನಲ್ಗೆ ಪ್ರವೇಶಿಸಿದ್ದರು. ಅಂತಿಮ ಹಣಾಹಣಿಯಲ್ಲಿ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ನಿಖಿಲ್ ಶೆಟ್ಟಿ, ಕೋಚ್ ಕೌಶಿಕ್ ಬೋಳೂರು ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೆ ಮೊಹಿತ್ ಕರ್ಕೇರ, ಸುದೀಪ್ ಕೊಟ್ಟಾರಿ ಹಾಗೂ ಕಾರ್ತಿಕ್ ಪುಟ್ರನ್ ಅವರೊಂದಿಗೆ ಕಶರ್ಪ್ ಫಿಟ್ನೆಸ್ ಮತ್ತು ದಿ ಡೆನ್ನಲ್ಲಿ ನಿಯಮಿತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಇದೇ ಕೇಂದ್ರದಲ್ಲಿ ಅವರು ಎಂಎಂಎ ತರಬೇತಿಯನ್ನು ಸಹ ನೀಡುತ್ತಿದ್ದಾರೆ.
ಅಂತರರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ಮಂಗಳೂರು ಹಾಗೂ ಭಾರತದ ಕೀರ್ತಿಯನ್ನು ಹೆಚ್ಚಿಸಿರುವ ನಿಖಿಲ್ ಶೆಟ್ಟಿ ಅವರ ಸಾಧನೆಗೆ ಕ್ರೀಡಾಭಿಮಾನಿಗಳು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಕರಾವಳಿಯ ಯುವ ಕ್ರೀಡಾಪಟುಗಳಿಗೆ ಅವರ ಸಾಧನೆ ಮತ್ತಷ್ಟು ಪ್ರೇರಣೆಯಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಅಂತರರಾಷ್ಟ್ರೀಯ ಪದಕಗಳನ್ನು ಗೆಲ್ಲಲಿ ಎಂಬ ಹಾರೈಕೆಗಳು ವ್ಯಕ್ತವಾಗಿವೆ.