ಗ್ಲ್ಯಾಸ್ಗೋ, ಆ. 03 (DaijiworldNews/TA): ಸ್ಕಾಟ್ಲ್ಯಾಂಡ್ನಲ್ಲಿ ನಡೆದ 2026ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ವರ್ಣರಂಜಿತ ಸಮಾರೋಪ ಸಮಾರಂಭದೊಂದಿಗೆ ಅಧಿಕೃತ ತೆರೆ ಬಿದ್ದಿದೆ. ಈ ಸಂದರ್ಭದಲ್ಲಿ 2030ರ ಶತಮಾನೋತ್ಸವ (ಸೆಂಟಿನರಿ) ಕಾಮನ್ವೆಲ್ತ್ ಕ್ರೀಡಾಕೂಟದ ಆತಿಥ್ಯ ವಹಿಸಲಿರುವ ಭಾರತಕ್ಕೆ ಕಾಮನ್ವೆಲ್ತ್ ಕ್ರೀಡಾಕೂಟದ ಧ್ವಜ ಹಾಗೂ ಬ್ಯಾಟನ್ನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು.

2030ರ ಕಾಮನ್ವೆಲ್ತ್ ಕ್ರೀಡಾಕೂಟವು ಅಹಮದಾಬಾದ್ನಲ್ಲಿ ನಡೆಯಲಿದ್ದು, ಸಮಾರೋಪ ಸಮಾರಂಭದಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿ.ಟಿ. ಉಷಾ ಹಾಗೂ ಗುಜರಾತ್ ಉಪ ಮುಖ್ಯಮಂತ್ರಿ ಹರ್ಷ್ ಸಂಘವಿ ಸೇರಿದಂತೆ ಭಾರತೀಯ ಪ್ರತಿನಿಧಿಗಳಿಗೆ ಸ್ಕಾಟ್ಲ್ಯಾಂಡ್ ಅಧಿಕಾರಿಗಳು ಧ್ವಜ ಮತ್ತು ಬ್ಯಾಟನ್ ಹಸ್ತಾಂತರಿಸಿದರು.
ಸಮಾರೋಪ ಸಮಾರಂಭವು ಸ್ಕಾಟ್ಲ್ಯಾಂಡ್ನ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸುವ ಕಾರ್ಯಕ್ರಮದೊಂದಿಗೆ ಆರಂಭವಾಗಿ, ಬಳಿಕ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯತೆಯನ್ನು ಬಿಂಬಿಸುವ ಮನಮೋಹಕ ಪ್ರದರ್ಶನಗಳೊಂದಿಗೆ ಮುಂದುವರಿಯಿತು. ಎರಡೂ ರಾಷ್ಟ್ರಗಳ ಸಂಗೀತಗಾರರು ಹಾಗೂ ನೃತ್ಯಗಾರರು ನೀಡಿದ ‘ಜುಗಲ್ಬಂದಿ’ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸಿತು. ಕ್ರೀಡಾಪಟುಗಳ ಪರೇಡ್ನಲ್ಲಿ ಭಾರತದ ಪರವಾಗಿ ಚಿನ್ನದ ಪದಕ ವಿಜೇತ ಬಾಕ್ಸರ್ ಜೈಸ್ಮಿನ್ ಲಂಬೋರಿಯಾ ರಾಷ್ಟ್ರಧ್ವಜ ಹಿಡಿದು ಮುನ್ನಡೆಸಿದರು. ಗ್ಲ್ಯಾಸ್ಗೋದ ಓವಿಒ ಹೈಡ್ರೋ ಕ್ರೀಡಾಂಗಣದಲ್ಲಿ ಭಾರತ ಮತ್ತು ಸ್ಕಾಟ್ಲ್ಯಾಂಡ್ ಸಂಗೀತದ ಅಪೂರ್ವ ಸಂಗಮವೂ ಗಮನ ಸೆಳೆಯಿತು.
ಖ್ಯಾತ ಗಾಯಕ ಶಂಕರ್ ಮಹಾದೇವನ್ ಹಾಗೂ ಅವರ ಪುತ್ರರು ‘ಏ ವತನ್’, ‘ಭಾಗ್ ಮಿಲ್ಖಾ ಭಾಗ್’, ‘ಲೇಹ್ರಾ ದೋ’ ಮತ್ತು ‘ಸಬ್ಸೇ ಆಗೆ ಹೋಂಗೆ ಹಿಂದುಸ್ತಾನಿ’ ಸೇರಿದಂತೆ ಹಲವು ದೇಶಭಕ್ತಿ ಗೀತೆಗಳನ್ನು ಹಾಡಿ ಸಮಾರಂಭದ ಮೆರುಗು ಹೆಚ್ಚಿಸಿದರು. 2017ರ ಮಿಸ್ ವರ್ಲ್ಡ್ ಮನುಷಿ ಚಿಲ್ಲರ್ ನೇತೃತ್ವದಲ್ಲಿ ‘ವಂದೇ ಮಾತರಂ’ ಗೀತೆಗೆ ನಡೆದ ನೃತ್ಯ ಪ್ರದರ್ಶನವೂ ವಿಶೇಷ ಆಕರ್ಷಣೆಯಾಗಿತ್ತು. ಸ್ಕಾಟ್ಲ್ಯಾಂಡ್ನ ಪ್ರಸಿದ್ಧ ಬ್ಯಾಂಡ್ ‘ಸಿಂಪಲ್ ಮೈಂಡ್ಸ್’ ಹಾಗೂ ಆಸ್ಟ್ರೇಲಿಯಾದ ಗಾಯಕಿ ಡೆಲ್ಟಾ ಗುಡ್ರೆಮ್ ಅವರ ಸಂಗೀತ ಕಾರ್ಯಕ್ರಮಗಳು ಸಮಾರಂಭಕ್ಕೆ ಮತ್ತಷ್ಟು ಕಳೆ ತಂದವು.
2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ಸೇರಿ ಒಟ್ಟು 39 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ತನ್ನ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 2010ರಲ್ಲಿ ನವದೆಹಲಿಯಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಿದ್ದ ಭಾರತ, ಇದೀಗ 2030ರಲ್ಲಿ ಅಹಮದಾಬಾದ್ನಲ್ಲಿ ಮತ್ತೊಮ್ಮೆ ಆತಿಥ್ಯ ವಹಿಸುವ ಮೂಲಕ ಆಸ್ಟ್ರೇಲಿಯಾದ ಬಳಿಕ ಎರಡು ಬಾರಿ ಕಾಮನ್ವೆಲ್ತ್ ಕ್ರೀಡಾಕೂಟ ಆಯೋಜಿಸುವ ವಿಶ್ವದ ಎರಡನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.