ಡೆಹ್ರಾಡೂನ್, ಆ. 08 (DaijiworldNews/AA): ಉತ್ತರಾಖಂಡದಲ್ಲಿ ಭೂಮಿ ಖರೀದಿಸಲು ಕ್ರಿಕೆಟಿಗ ರಿಷಭ್ ಪಂತ್ ಗೆ ಸಹಾಯ ಮಾಡುವುದಾಗಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಭರವಸೆ ನೀಡಿದ್ದಾರೆ.

ಉತ್ತರಾಖಂಡದಲ್ಲಿ ಮನೆ ಕಟ್ಟಲು ಭೂಮಿ ಕೊಡಿಸಿ ಎಂದು ರಿಷಭ್ ಪಂತ್ ಎಕ್ಸ್ ಖಾತೆಯಲ್ಲಿ ಮನವಿ ಮಾಡಿದ್ದರು. ರಿಷಭ್ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಟ್ಯಾಗ್ ಪೋಸ್ಟ್ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕರಿಯಿಸಿದ ಸಿಎಂ ಪುಷ್ಕರ್ ಧಾಮಿ, ನಿಯಮದ ಪ್ರಕಾರವೇ ಈ ಕೆಲಸ ಮಾಡಿಕೊಟ್ಟು, ಪಂತ್ ಅವರಿಗೆ ಎಲ್ಲಾ ರೀತಿಯ ಸಹಾಯ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಪೋಸ್ಟ್ ಮಾಡಿದ್ದಾರೆ.
"ನೀವು ಉತ್ತರಾಖಂಡದ ಹೆಮ್ಮೆ. ನಿಮ್ಮ ಅದ್ಭುತ ಆಟ ಮತ್ತು ಸಾಧನೆಗಳಿಂದ ನೀವು ದೇಶ ಹಾಗೂ ಜಗತ್ತಿನಲ್ಲಿ ದೇವಭೂಮಿಯ ಹೆಸರನ್ನು ಬೆಳಗಿದ್ದೀರಿ. ನಿಮ್ಮ ತಾಯ್ನಾಡಿನ ಮೇಲಿನ ಪ್ರೀತಿ ಮತ್ತು ಇಲ್ಲಿಗೆ ಮರಳುವ ನಿಮ್ಮ ಭಾವನೆ ಅತ್ಯಂತ ಶ್ಲಾಘನೀಯ" ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
"ನೀವು ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ, ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಅವರು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸಿ, ನಿಯಮಗಳ ಪ್ರಕಾರ ನಿಮಗೆ ಸಿಗಬೇಕಾದ ಎಲ್ಲಾ ರೀತಿಯ ಸಹಾಯವನ್ನು ಮಾಡಲಿದ್ದಾರೆ" ಎಂದು ತಿಳಿಸಿದ್ದಾರೆ.
"ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸಿದ್ದಕ್ಕೆ ಉಡುಗೊರೆಯಾಗಿ ಜಾಗ ಸಿಕ್ಕರೆ ಚೆನ್ನಾಗಿರುತ್ತೆ, ಆದರೆ ನಿಮಗೆ ಒಪ್ಪಿಗೆಯಿದ್ದರೆ ನಾನು ಅದನ್ನು ಸರ್ಕಾರ ನಿಗದಿಪಡಿಸಿರುವ ದರಕ್ಕೆ ಖರೀದಿಸಲು ಬಯಸುತ್ತೇನೆ. ಹೇಗಾದರೂ ಮಾಡಿ ನನ್ನ ಸ್ವಂತ ರಾಜ್ಯದಲ್ಲಿ ನನ್ನ ಮೊದಲನೆಯ ಮನೆ ಕಟ್ಟಿಕೊಳ್ಳಬೇಕು, ದಯವಿಟ್ಟು ಸಹಾಯ ಮಾಡಿ. ಆದರೆ ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ" ಎಂದು ರಿಷಭ್ ಪಂತ್ ಪೋಸ್ಟ್ ಮಾಡಿದ್ದರು.