ಚಿಕ್ಕಬಳ್ಳಾಪುರ, ಆ. 09 (DaijiworldNews/TA): ನಂದಿ ಹಿಲ್ಸ್ನಲ್ಲಿ ನಡೆದ ಮಾನ್ಸೂನ್ ಮ್ಯಾರಥಾನ್ ವೇಳೆ ಕ್ರೀಡಾಪಟುವೊಬ್ಬರು ಕುಸಿದುಬಿದ್ದು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತರನ್ನು ಅಮನ್ ದೀಪ್ ಸಿಂಗ್ ಜಗಡೆ (31) ಎಂದು ಗುರುತಿಸಲಾಗಿದೆ. ಹೃದಯಾಘಾತದಿಂದ ಅವರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

10 ಕಿ.ಮೀ. ಮತ್ತು 21 ಕಿ.ಮೀ. ವಿಭಾಗಗಳಲ್ಲಿ ನಡೆದ ಮ್ಯಾರಥಾನ್ನಲ್ಲಿ ಅಮನ್ ದೀಪ್ ಸಿಂಗ್ 21 ಕಿ.ಮೀ. ಓಟದಲ್ಲಿ ಭಾಗವಹಿಸಿದ್ದರು. ನಂದಿಗಿರಿಧಾಮದ ಬೆಟ್ಟದ ಮೇಲೆ ಓಡುತ್ತಿದ್ದ ವೇಳೆ ಏಕಾಏಕಿ ಕುಸಿದುಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣವೇ ಅವರನ್ನು ಮುದ್ದೇನಹಳ್ಳಿಯ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಮನ್ ದೀಪ್ ಸಿಂಗ್ ಅವರು ಪಂಜಾಬ್ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ. ಅಮನ್ ದೀಪ್ ಅವರು 21 ಕಿ.ಮೀ. ಓಟದ ಅರ್ಧದಷ್ಟು ದೂರವನ್ನು ಕ್ರಮಿಸಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮ್ಯಾರಥಾನ್ನಲ್ಲಿ ಭಾಗವಹಿಸುವ ಕುರಿತು ಅಮನ್ ದೀಪ್ ಸಿಂಗ್ ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. 21 ಕಿ.ಮೀ. ಓಟದಲ್ಲಿ ದೇವರು ಜೊತೆಗಿದ್ದಾನೆ ಎಂದು ಅವರು ಬರೆದುಕೊಂಡಿದ್ದರು ಎನ್ನಲಾಗಿದೆ. ಆದರೆ ಮ್ಯಾರಥಾನ್ ಮುಗಿಸುವ ಮುನ್ನವೇ ಅವರು ದುರಂತ ಅಂತ್ಯ ಕಂಡಿರುವುದು ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳಲ್ಲಿ ಆಘಾತ ಮೂಡಿಸಿದೆ.
ಮೃತದೇಹವನ್ನು ಸದ್ಯ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಬೆಂಗಳೂರಿನಲ್ಲಿರುವ ಅವರ ಪತ್ನಿ ಆಗಮನಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ. ನಂದಿ ಹಿಲ್ಸ್ ಮಾನ್ಸೂನ್ ಮ್ಯಾರಥಾನ್ನಲ್ಲಿ 10 ಕಿ.ಮೀ. ಹಾಗೂ 21 ಕಿ.ಮೀ. ವಿಭಾಗಗಳಲ್ಲಿ ಒಟ್ಟು 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಕರ್ನಾಟಕ ಸರ್ಕಾರ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ಸಹಯೋಗದಲ್ಲಿ ಮ್ಯಾರಥಾನ್ ಆಯೋಜಿಸಲಾಗಿತ್ತು. ಅಮನ್ ದೀಪ್ ಸಿಂಗ್ ಅವರ ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕ ಸ್ಪಷ್ಟವಾಗುವ ಸಾಧ್ಯತೆಯಿದೆ.