ನವದೆಹಲಿ, ಆ. 11 (DaijiworldNews/AA): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಅವರ ಪತ್ನಿ ಡೋನಾ ಗಂಗೂಲಿ ಅವರಿಗೆ ಕೊಲೆ ಬೆದರಿಕೆ ಬಂದಿದೆ. ಈ ಸಂಬಂಧ ಅವರು ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರಸ್ತುತ ಗಂಗೂಲಿ ಅವರು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಆರು ತಿಂಗಳಿಂದ ಅವರ ಕಚೇರಿಗೆ ಇಂತಹ ಬೆದರಿಕೆ ಪತ್ರಗಳು ಬರುತ್ತಿವೆ. ಆರಂಭದಲ್ಲಿ ಇವುಗಳನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಆ.10ರಂದು ಬಂದ ಎರಡು ಪತ್ರಗಳಲ್ಲಿ ಸೌರವ್ ಗಂಗೂಲಿ ಹಾಗೂ ಅವರ ಪತ್ನಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿತ್ತು. ಅಲ್ಲದೇ ಆವರ ಆಪ್ತರಿಗೆ ತೊಂದರೆ ಕೊಡಲಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖವಾಗಿತ್ತು.
ಬೆದರಿಕೆ ಬೆನ್ನಲ್ಲೇ ಸೌರವ್ ಗಂಗೂಲಿ ಅವರ ವ್ಯವಸ್ಥಾಪಕರು ಕೋಲ್ಕತ್ತಾದ ದಕ್ಷಿಣ ವಿಭಾಗದ ಠಾಕೂರ್ಪುಕುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಪತ್ರಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದು, ಕಳುಹಿಸಿದವರ ಗುರುತು ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.
ನಾವು ದೂರಿನ ಬಗ್ಗೆ ಗಂಭೀರವಾಗಿದ್ದು, ತನಿಖೆ ಆರಂಭಿಸಿದ್ದೇವೆ. ಉತ್ತರ 24 ಪರಗಣ ಜಿಲ್ಲೆಯ ಬೆಳಗರಿಯಾ ಪ್ರದೇಶದ ವ್ಯಕ್ತಿಯೊಬ್ಬ ಕೊರಿಯರ್ ಸೇವೆ ಮೂಲಕ ಈ ಪತ್ರಗಳನ್ನು ಕಳುಹಿಸಿರಬಹುದು ಎಂದು ಶಂಕಿಸಲಾಗಿದೆ. ಕಳುಹಿಸುವವರು ಬಳಸಿದ್ದಾರೆನ್ನಲಾದ ಸಿಮ್ ಕಾರ್ಡ್ ಹಾಗೂ ಕೊರಿಯರ್ ಏಜೆನ್ಸಿಯ ವಿವರಗಳನ್ನು ಕಲೆಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.