ಲಿಸ್ಬನ್, ಆ. 12 (DaijiworldNews/TA): ಫುಟ್ಬಾಲ್ ಜಗತ್ತಿನ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಅವರ ದೀರ್ಘಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪೋರ್ಚುಗಲ್ನ ಲಿಸ್ಬನ್ ಬಳಿಯ ಐಷಾರಾಮಿ ಕರಾವಳಿ ಪಟ್ಟಣ ಕ್ಯಾಸ್ಕೈಸ್ನಲ್ಲಿ ಆಗಸ್ಟ್ 11ರಂದು ಈ ಜೋಡಿ ಸರಳವಾಗಿ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ.

ಅದ್ದೂರಿ ಸಮಾರಂಭಕ್ಕೆ ಬದಲಾಗಿ ಆಪ್ತ ಕುಟುಂಬ ಸದಸ್ಯರು ಹಾಗೂ ತಮ್ಮ ಐದು ಮಕ್ಕಳ ಸಮ್ಮುಖದಲ್ಲಿ ರೊನಾಲ್ಡೊ-ಜಾರ್ಜಿನಾ ವಿವಾಹ ನೆರವೇರಿದೆ. ಮದುವೆಯ ಬಳಿಕ ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ವಿವಾಹದ ಉಂಗುರಗಳ ಚಿತ್ರ ಹಂಚಿಕೊಂಡು “C❤️G”ಎಂಬ ಸರಳ ಶೀರ್ಷಿಕೆಯೊಂದಿಗೆ ಮದುವೆಯ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಜಾರ್ಜಿನಾ ರೋಡ್ರಿಗಸ್ ಅವರು 2025ರ ಆಗಸ್ಟ್ 11ರಂದು ರೊನಾಲ್ಡೊ ಜೊತೆಗಿನ ನಿಶ್ಚಿತಾರ್ಥವನ್ನು ಅಧಿಕೃತವಾಗಿ ಘೋಷಿಸಿದ್ದರು. ಇದೀಗ ಸರಿಯಾಗಿ ಒಂದು ವರ್ಷದ ಬಳಿಕ, ಆಗಸ್ಟ್ 11, 2026ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.
ಮದುವೆಯಲ್ಲಿ ರೊನಾಲ್ಡೊ ಅವರ ಐದು ಮಕ್ಕಳು ಪ್ರಮುಖ ಅತಿಥಿಗಳಾಗಿದ್ದರು. ಕ್ರಿಸ್ಟಿಯಾನೊ ಜೂನಿಯರ್, ಅವಳಿ ಮಕ್ಕಳಾದ ಇವಾ ಮಾರಿಯಾ ಮತ್ತು ಮಾಟಿಯೊ, ಅಲಾನಾ ಮಾರ್ಟಿನಾ ಹಾಗೂ ಬೆಲ್ಲಾ ಎಸ್ಮೆರಾಲ್ಡಾ ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾದರು. ರೊನಾಲ್ಡೊ ನಿಶ್ಚಿತಾರ್ಥದ ವೇಳೆ ಜಾರ್ಜಿನಾಗೆ ತೊಡಿಸಿದ್ದ ವಜ್ರದ ಉಂಗುರವೂ ಭಾರೀ ಸುದ್ದಿಯಾಗಿತ್ತು. ಇದರ ಮೌಲ್ಯ ಸುಮಾರು 5 ಮಿಲಿಯನ್ ಡಾಲರ್, ಅಂದರೆ ಭಾರತೀಯ ರೂಪಾಯಿಯಲ್ಲಿ ರೂ.41 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿತ್ತು.
ಮದುವೆಗೂ ಮುನ್ನ ರೊನಾಲ್ಡೊ-ಜಾರ್ಜಿನಾ ವಿವಾಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವದಂತಿಗಳು ಹರಿದಾಡಿದ್ದವು. AI ಸೃಷ್ಟಿಸಿದ ನಕಲಿ ಫೋಟೋಗಳು, ಅದ್ದೂರಿ ಮದುವೆ ಸಮಾರಂಭದ ಕುರಿತ ಸುಳ್ಳು ಸುದ್ದಿಗಳು ವೈರಲ್ ಆಗಿದ್ದವು. ಮಡೈರಾದ ಫಂಚಲ್ ಕ್ಯಾಥೆಡ್ರಲ್ನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅದ್ದೂರಿ ಮದುವೆ ನಡೆಯಲಿದೆ ಎಂಬ ವದಂತಿಯನ್ನು ನಂಬಿ ಆಗಸ್ಟ್ 8ರಂದು ನೂರಾರು ಅಭಿಮಾನಿಗಳು ಚರ್ಚ್ ಬಳಿ ಜಮಾಯಿಸಿದ್ದರು. ಆದರೆ ಅಲ್ಲಿ ಬೇರೆ ಜೋಡಿಯ ವಿವಾಹ ಸಮಾರಂಭ ನಡೆದಿತ್ತು.
ಇದರ ಜೊತೆಗೆ ಲಿಯೋನೆಲ್ ಮೆಸ್ಸಿ ಹಾಗೂ ಕಿಲಿಯನ್ ಎಂಬಾಪೆ ಮದುವೆಗೆ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂಬ ಸುದ್ದಿಗಳೂ ಹರಿದಾಡಿದ್ದವು. ಆದರೆ ಇದೀಗ ಅತ್ಯಂತ ಸರಳವಾಗಿ ವಿವಾಹವಾಗುವ ಮೂಲಕ ರೊನಾಲ್ಡೊ-ಜಾರ್ಜಿನಾ ಜೋಡಿ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದೆ. ವಿಶ್ವದ ಕ್ರೀಡಾಭಿಮಾನಿಗಳ ನೆಚ್ಚಿನ ತಾರೆ ರೊನಾಲ್ಡೊ ಅವರ ವೈವಾಹಿಕ ಜೀವನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.