ನವದೆಹಲಿ, ಆ. 16 (DaijiworldNews/TA): 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ವರದಿಯಾಗಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸಲಿರುವ ಈ ಮೆಗಾ ಟೂರ್ನಿಯನ್ನು ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಆರಂಭಿಸುವ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಚಿಂತನೆ ನಡೆಸಿದೆ.

ವರದಿಗಳ ಪ್ರಕಾರ, 2027ರ ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿಯವರ ಜಯಂತಿಯಂದೇ ವಿಶ್ವಕಪ್ಗೆ ಚಾಲನೆ ನೀಡುವ ಸಾಧ್ಯತೆಯನ್ನು ಐಸಿಸಿ ಪರಿಶೀಲಿಸುತ್ತಿದೆ. ಈ ಮೂಲಕ ಕ್ರಿಕೆಟ್ ಟೂರ್ನಿಗೆ ಕ್ರೀಡೆಯ ಜೊತೆಗೆ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನೂ ನೀಡುವ ಉದ್ದೇಶ ಹೊಂದಲಾಗಿದೆ. ಗಾಂಧಿ ಜಯಂತಿಯಂದೇ ವಿಶ್ವಕಪ್ ಆರಂಭ ಯಾಕೆ? : ಮಹಾತ್ಮ ಗಾಂಧೀಜಿಯವರು ತಮ್ಮ ಜೀವನದ ಮಹತ್ವದ 21 ವರ್ಷಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಕಳೆದಿದ್ದರು. ಅಲ್ಲಿಯೇ ಸತ್ಯಾಗ್ರಹ ಮತ್ತು ಅಹಿಂಸೆಯಂತಹ ತತ್ವಗಳು ಅವರ ಚಿಂತನೆಗಳಲ್ಲಿ ಮತ್ತಷ್ಟು ಗಟ್ಟಿಯಾಗಿ ರೂಪುಗೊಂಡವು.
ಹೀಗಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐತಿಹಾಸಿಕ ಬಾಂಧವ್ಯವನ್ನು ಸ್ಮರಿಸುವುದರ ಜೊತೆಗೆ, ಗಾಂಧೀಜಿಯವರ ಶಾಂತಿ ಮತ್ತು ಅಹಿಂಸೆಯ ಸಂದೇಶವನ್ನು ಜಾಗತಿಕ ಮಟ್ಟದಲ್ಲಿ ಸಾರುವ ಉದ್ದೇಶದಿಂದ ಅಕ್ಟೋಬರ್ 2ರಂದು ವಿಶ್ವಕಪ್ ಆರಂಭಿಸುವ ಯೋಜನೆ ರೂಪಿಸಲಾಗುತ್ತಿದೆ ಎನ್ನಲಾಗಿದೆ. ಈ ಹಿಂದೆ ವಿಶ್ವಕಪ್ ಅಕ್ಟೋಬರ್ 4 ಅಥವಾ ಅಕ್ಟೋಬರ್ 8ರಿಂದ ಆರಂಭವಾಗುವ ಸಾಧ್ಯತೆಗಳಿದ್ದವು. ಇದೀಗ ಅಕ್ಟೋಬರ್ 2ರಿಂದ ಪಂದ್ಯಾವಳಿ ಆರಂಭಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗಾದರೆ ಸೆಪ್ಟೆಂಬರ್ ಕೊನೆಯ ವಾರದಲ್ಲೇ ಅಭ್ಯಾಸ ಪಂದ್ಯಗಳನ್ನು ಪೂರ್ಣಗೊಳಿಸುವ ಸಾಧ್ಯತೆಯಿದೆ.
ಆರಂಭದ ದಿನಾಂಕ ಬದಲಾದರೂ, 2027ರ ನವೆಂಬರ್ 21ರಂದು ಫೈನಲ್ ನಡೆಸುವ ಯೋಜನೆಯಲ್ಲಿ ಬದಲಾವಣೆ ಆಗದಿರುವ ಸಾಧ್ಯತೆಯಿದೆ. ಹೀಗಾಗಿ ಸುಮಾರು 50 ದಿನಗಳ ಕಾಲ ವಿಶ್ವಕಪ್ ಕ್ರಿಕೆಟ್ನ ರೋಚಕ ಪಂದ್ಯಗಳನ್ನು ಕಣ್ತುಂಬಿಕೊಳ್ಳಬಹುದು. 2027ರ ವಿಶ್ವಕಪ್ನಲ್ಲಿ ತಂಡಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತಿದೆ. ಕಳೆದ ಎರಡು ಆವೃತ್ತಿಗಳಲ್ಲಿ 10 ತಂಡಗಳು ಭಾಗವಹಿಸಿದ್ದರೆ, ಈ ಬಾರಿ 14 ತಂಡಗಳು ವಿಶ್ವಕಪ್ ಕಣಕ್ಕಿಳಿಯಲಿವೆ. ಇದರ ಜೊತೆಗೆ ಹೊಸ ಸ್ಪರ್ಧಾ ಮಾದರಿಯನ್ನೂ ಪರಿಚಯಿಸುವ ಯೋಜನೆಯಿದೆ. ಅರ್ಹತೆ ಪಡೆದ ತಂಡಗಳ ನಡುವಿನ ಆರಂಭಿಕ ಹಂತಗಳ ಬಳಿಕ ಮುಂದಿನ ಹಂತಗಳಿಗೆ ಸಾಗುವ ವ್ಯವಸ್ಥೆ ಇರಲಿದೆ.
ವಿಶ್ವಕಪ್ ಪಂದ್ಯಗಳು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದ ಒಟ್ಟು 12 ಕ್ರೀಡಾಂಗಣಗಳಲ್ಲಿ ನಡೆಯುವ ನಿರೀಕ್ಷೆಯಿದೆ. ದಕ್ಷಿಣ ಆಫ್ರಿಕಾದಲ್ಲಿ 8, ಜಿಂಬಾಬ್ವೆಯಲ್ಲಿ 3 ಹಾಗೂ ನಮೀಬಿಯಾದ ವಿಂಡ್ಹೋಕ್ನಲ್ಲಿ 1 ಕ್ರೀಡಾಂಗಣವನ್ನು ಬಳಸುವ ಯೋಜನೆ ಇದೆ. ಒಟ್ಟಿನಲ್ಲಿ, 2027ರ ಏಕದಿನ ವಿಶ್ವಕಪ್ ಕೇವಲ ಕ್ರಿಕೆಟ್ನ ಮಹಾಸಮರವಷ್ಟೇ ಅಲ್ಲದೆ, ಭಾರತ ಮತ್ತು ದಕ್ಷಿಣ ಆಫ್ರಿಕಾದ ಐತಿಹಾಸಿಕ ಸಂಬಂಧ ಹಾಗೂ ಮಹಾತ್ಮ ಗಾಂಧೀಜಿಯವರ ಶಾಂತಿಯ ಸಂದೇಶವನ್ನು ಜಗತ್ತಿಗೆ ಸಾರುವ ವೇದಿಕೆಯಾಗುವ ಸಾಧ್ಯತೆಯಿದೆ. ಗಾಂಧಿ ಜಯಂತಿಯಂದು ವಿಶ್ವಕಪ್ಗೆ ಚಾಲನೆ ಸಿಕ್ಕರೆ, ಇದು ಕ್ರಿಕೆಟ್ ಇತಿಹಾಸದಲ್ಲೇ ವಿಶಿಷ್ಟ ಆರಂಭವಾಗಲಿದೆ.