ಆಮ್ಸ್ಟರ್ವೀನ್, ಆ. 19 (DaijiworldNews/AA): ನೆದರ್ಲೆಂಡ್ನಲ್ಲಿ ನಡೆಯುತ್ತಿರುವ ಪುರುಷರ ಹಾಕಿ ವಿಶ್ವಕಪ್ 2026ರ ಪೂಲ್ 'ಡಿ' ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದೆ.

ವ್ಯಾಗ್ನರ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 5-3 ಗೋಲುಗಳ ಅಂತರದಿಂದ ಪಾಕಿಸ್ತಾನವನ್ನು ಮಣಿಸಿದೆ. ಈ ಸೋಲಿನೊಂದಿಗೆ ಪಾಕ್ ಟೂರ್ನಿಯಿಂದಲೇ ಹೊರಬಿದ್ದಿದೆ.
ಹಿಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿದ್ದ ಭಾರತ ತಂಡ ಪಾಕ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿತು. ಭಾರತದ ಪರ ನಾಯಕ ಹರ್ಮನ್ಪ್ರೀತ್ ಸಿಂಗ್ ಮತ್ತು ಅಭಿಷೇಕ್ ತಲಾ ಎರಡು ಗೋಲು ಗಳಿಸಿದರು. ಜೊತೆಗೆ ಹಾರ್ದಿಕ್ ಸಿಂಗ್ ಒಂದು ಗೋಲು ದಾಖಲಿಸಿ ಗೆಲುವಿಗೆ ಕಾರಣರಾದರು.
ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡಿದ ಭಾರತ, ಎರಡನೇ ಕ್ವಾರ್ಟರ್ ವೇಳೆಗೆ 3-0 ಅಂತರದ ಮುನ್ನಡೆ ಸಾಧಿಸಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ನಂತರ ಪಾಕಿಸ್ತಾನ ಎರಡು ಗೋಲು ಗಳಿಸಿತಾದರೂ, ಭಾರತ ಮತ್ತೆ ಗೋಲು ದಾಖಲಿಸಿ ತನ್ನ ಮುನ್ನಡೆ ಸಾಧಿಸಿತು. ಅಂತಿಮವಾಗಿ 5-3 ಅಂತರದಿಂದ ಪಂದ್ಯವನ್ನು ಗೆದ್ದಿತು.
ಪಾಕ್ ವಿರುದ್ಧದ ಈ ಗೆಲುವಿನೊಂದಿಗೆ ಭಾರತವು ಪೂಲ್ 'ಡಿ'ನಲ್ಲಿ ಒಟ್ಟು 6 ಅಂಕಗಳನ್ನು ಗಳಿಸಿ ಎರಡನೇ ಸ್ಥಾನದೊಂದಿಗೆ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಮುಂದಿನ ಹಂತದಲ್ಲಿ ಭಾರತ ತಂಡವು ನೆದರ್ಲೆಂಡ್ಸ್ ಹಾಗೂ ಅರ್ಜೆಂಟೀನಾ ಅಥವಾ ನ್ಯೂಜಿಲೆಂಡ್ ತಂಡಗಳನ್ನು ಎದುರಿಸಲಿದೆ.