ಹೆಡಿಂಗ್ಲಿ, ಆ. 20 (DaijiworldNews/TA): ಕ್ರಿಕೆಟ್ನಲ್ಲಿ 5 ವಿಕೆಟ್ಗಳ ಸಾಧನೆ ಮಾಡಿದ ಬೌಲರ್ ಪಂದ್ಯದ ಚೆಂಡನ್ನು ಸ್ಮರಣಿಕೆಯಾಗಿ ಮನೆಗೆ ಕೊಂಡೊಯ್ಯುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ ಇಂಗ್ಲೆಂಡ್ ಮತ್ತು ಪಾಕಿಸ್ತಾನ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಇಬ್ಬರು ಬೌಲರ್ಗಳು ತಲಾ 5 ವಿಕೆಟ್ ಕಬಳಿಸಿದ ಪರಿಣಾಮ, ಪಂದ್ಯದ ಚೆಂಡು ಯಾರ ಪಾಲಾಗಬೇಕು ಎಂಬ ಕುತೂಹಲಕಾರಿ ಪ್ರಶ್ನೆ ಎದುರಾಯಿತು. ಈ ಗೊಂದಲಕ್ಕೆ ಇಂಗ್ಲೆಂಡ್ ವೇಗಿಗಳಾದ ಜೋಶ್ ಟಾಂಗ್ ಮತ್ತು ಓಲಿ ರಾಬಿನ್ಸನ್ ಕಂಡುಕೊಂಡ ಪರಿಹಾರ ಇದೀಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.

ಹೆಡಿಂಗ್ಲಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ್ ತಂಡ ಇಂಗ್ಲೆಂಡ್ ವೇಗಿಗಳ ದಾಳಿಗೆ ತತ್ತರಿಸಿ ಕೇವಲ 171 ರನ್ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಜೋಶ್ ಟಾಂಗ್ 46 ರನ್ ನೀಡಿ 5 ವಿಕೆಟ್ ಪಡೆದರೆ, ಓಲಿ ರಾಬಿನ್ಸನ್ 51 ರನ್ ನೀಡಿ 5 ವಿಕೆಟ್ ಕಬಳಿಸಿದರು. ಇಬ್ಬರ ಜಂಟಿ ದಾಳಿಯಿಂದ ಪಾಕಿಸ್ತಾನ್ ಬ್ಯಾಟಿಂಗ್ ಪಡೆ ಸಂಪೂರ್ಣವಾಗಿ ಕುಸಿಯಿತು.
ಇಬ್ಬರೂ ಬೌಲರ್ಗಳು ತಲಾ ಐದು ವಿಕೆಟ್ ಪಡೆದಿದ್ದರಿಂದ ಪಂದ್ಯದ ಅಧಿಕೃತ ಚೆಂಡು ಯಾರಿಗೆ ನೀಡಬೇಕು ಎಂಬ ಪ್ರಶ್ನೆ ಎದುರಾಯಿತು. ಈ ವೇಳೆ ಓಲಿ ರಾಬಿನ್ಸನ್ ನೀಡಿದ ಐಡಿಯಾ ಎಲ್ಲರನ್ನೂ ಅಚ್ಚರಿಗೊಳಿಸಿತು. ಚೆಂಡನ್ನು ಅರ್ಧಕ್ಕೆ ಕತ್ತರಿಸಿ ಇಬ್ಬರೂ ಹಂಚಿಕೊಳ್ಳೋಣ ಎಂಬ ಸಲಹೆಯನ್ನು ಅವರು ಮುಂದಿಟ್ಟರು. ತಂಡದ ಮ್ಯಾನೇಜರ್ ವೇಯ್ನ್ ಬೆಂಟ್ಲಿ ಈ ವಿಶೇಷ ಆಲೋಚನೆಗೆ ಸಾಥ್ ನೀಡಿದ್ದು, ಚೆಂಡನ್ನು ಹೆಡಿಂಗ್ಲಿ ಮೈದಾನದ ಸಿಬ್ಬಂದಿಗೆ ಹಸ್ತಾಂತರಿಸಿದರು.
ವಿಶೇಷ ಕಟಿಂಗ್ ಉಪಕರಣ ಬಳಸಿ ಮೈದಾನದ ಸಿಬ್ಬಂದಿ ಕೇವಲ ಐದು ನಿಮಿಷಗಳಲ್ಲಿ ಚೆಂಡನ್ನು ಅದರ ಸೀಮ್ ಮೂಲಕ ನಿಖರವಾಗಿ ಅರ್ಧಕ್ಕೆ ಕತ್ತರಿಸಿದರು. ನಂತರ ಚೆಂಡಿನ ತಲಾ ಅರ್ಧ ಭಾಗವನ್ನು ಜೋಶ್ ಟಾಂಗ್ ಮತ್ತು ಓಲಿ ರಾಬಿನ್ಸನ್ಗೆ ನೀಡಲಾಯಿತು. ಇಬ್ಬರು ಬೌಲರ್ಗಳು ಅರ್ಧ ಚೆಂಡುಗಳನ್ನು ಹಿಡಿದಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇಂಗ್ಲೆಂಡ್ ಪರ ಒಂದೇ ಟೆಸ್ಟ್ ಇನ್ನಿಂಗ್ಸ್ನಲ್ಲಿ ಇಬ್ಬರು ಬೌಲರ್ಗಳು ತಲಾ ಐದು ವಿಕೆಟ್ ಪಡೆಯುವುದು ಅಪರೂಪದ ಸಾಧನೆಯಾಗಿದೆ. ಇದಕ್ಕೂ ಮುನ್ನ 2006ರಲ್ಲಿ ಓಲ್ಡ್ ಟ್ರಾಫರ್ಡ್ನಲ್ಲಿ ಪಾಕಿಸ್ತಾನ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಹರ್ಮಿಸನ್ ಮತ್ತು ಮಾಂಟಿ ಪಣೇಸರ್ ಈ ಸಾಧನೆ ಮಾಡಿದ್ದರು. ಸುಮಾರು ಎರಡು ದಶಕಗಳ ಬಳಿಕ ಜೋಶ್ ಟಾಂಗ್ ಮತ್ತು ಓಲಿ ರಾಬಿನ್ಸನ್ ಈ ಅಪರೂಪದ ಸಾಧನೆಯನ್ನು ಮರುಕಳಿಸಿದ್ದಾರೆ.
ಆದರೆ ಈ ಬಾರಿ ಸಾಧನೆಗಿಂತಲೂ ವಿಶೇಷವಾಗಿದ್ದು, 5 ವಿಕೆಟ್ಗಳ ಸ್ಮರಣಿಕೆಯಾದ ಪಂದ್ಯದ ಚೆಂಡನ್ನೇ ಅರ್ಧಕ್ಕೆ ಕತ್ತರಿಸಿ ಹಂಚಿಕೊಂಡಿರುವುದು! ಈ ವಿಭಿನ್ನ ಸಂಭ್ರಮಾಚರಣೆ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.