ಬ್ರಸೆಲ್ಸ್, ಸೆ. 06 (DaijiworldNews/TA): ಶ್ರೀಲಂಕಾದ 23 ವರ್ಷದ ಯುವ ಜಾವೆಲಿನ್ ಎಸೆತಗಾರ ರುಮೇಶ್ ತರಂಗ ಪತಿರಾಗೆ ಪ್ರತಿಷ್ಠಿತ ಡೈಮಂಡ್ ಲೀಗ್ 2026ರ ಫೈನಲ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಶ್ರೀಲಂಕಾದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪತಿರಾಗೆ ಪಾತ್ರರಾಗಿದ್ದಾರೆ. ಬೆಲ್ಜಿಯಂನ ಬ್ರಸೆಲ್ಸ್ನ ಕಿಂಗ್ ಬೌಡೌಯಿನ್ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಪತಿರಾಗೆ 89.04 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಅಗ್ರಸ್ಥಾನ ಪಡೆದರು.

ತೀವ್ರ ಚಳಿ ಹಾಗೂ ಕಠಿಣ ಹವಾಮಾನ ಪರಿಸ್ಥಿತಿಯಿಂದಾಗಿ ಆರಂಭದಲ್ಲಿ ಪತಿರಾಗೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅವರ ಮೊದಲ ಎರಡು ಎಸೆತಗಳು ಕ್ರಮವಾಗಿ 80.42 ಮೀಟರ್ ಮತ್ತು 79.73 ಮೀಟರ್ ದೂರಕ್ಕೆ ಮಾತ್ರ ಸಾಗಿದ್ದವು. ಈ ಹಂತದಲ್ಲಿ ಪೋಲೆಂಡ್ನ ಡಾವಿಡ್ ವೆಗ್ನರ್ ಹಾಗೂ ಒಲಿಂಪಿಕ್ ಚಾಂಪಿಯನ್ ಕೇಶಾರ್ನ್ ವಾಲ್ಕಾಟ್ ಮುನ್ನಡೆಯಲ್ಲಿದ್ದರು.
ಆದರೆ ಮೂರನೇ ಅವಕಾಶದಲ್ಲಿ ಲಯಕ್ಕೆ ಮರಳಿದ ಪತಿರಾಗೆ ಬರೋಬ್ಬರಿ 89.04 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಅಗ್ರಸ್ಥಾನಕ್ಕೇರಿದರು. ಬಳಿಕ ಯಾವುದೇ ಸ್ಪರ್ಧಿಗೂ ಅವರ ದಾಖಲೆಯನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 89.04 ಮೀಟರ್ ಎಸೆತದೊಂದಿಗೆ ಡೈಮಂಡ್ ಲೀಗ್ ಫೈನಲ್ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡರು.
ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಡೈಮಂಡ್ ಲೀಗ್ ಫೈನಲ್ಗೆ ಅರ್ಹತೆ ಪಡೆದಿದ್ದರೂ ಗಾಯದ ಕಾರಣ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ದೋಹಾ ಮತ್ತು ಲೌಸೇನ್ ಡೈಮಂಡ್ ಲೀಗ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದ್ದ ನೀರಜ್, ಬ್ರಸೆಲ್ಸ್ ಫೈನಲ್ಗೆ ಅರ್ಹತೆ ಗಳಿಸಿದ್ದರು. ಆದರೆ ತರಬೇತಿ ವೇಳೆ ಕಾಲಿನ ಹಿಮ್ಮಡಿಗೆ ಗಾಯವಾದ ಹಿನ್ನೆಲೆಯಲ್ಲಿ ಅಂತಿಮ ಕ್ಷಣದಲ್ಲಿ ಸ್ಪರ್ಧೆಯಿಂದ ಹೊರಗುಳಿಯಬೇಕಾಯಿತು. ಈ ಗಾಯದ ಕಾರಣ 2026ರ ಉಳಿದ ಕ್ರೀಡಾ ಋತುವಿನಿಂದ ನೀರಜ್ ದೂರ ಉಳಿಯಲಿದ್ದು, ಜಪಾನ್ನ ನಾಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲೂ ಅವರು ಸ್ಪರ್ಧಿಸುವುದಿಲ್ಲ.
ರುಮೇಶ್ ತರಂಗ ಪತಿರಾಗೆಯ ಕ್ರೀಡಾ ಪಯಣವೂ ವಿಶೇಷವಾಗಿದೆ. 16ನೇ ವಯಸ್ಸಿನಲ್ಲಿ ಅವರು ಶ್ರೀಲಂಕಾದ ಭರವಸೆಯ ಜೂನಿಯರ್ ಕ್ರಿಕೆಟ್ ವೇಗದ ಬೌಲರ್ ಆಗಿದ್ದರು. ಗಂಟೆಗೆ ಸುಮಾರು 134 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದ ಅವರಲ್ಲಿದ್ದ ಎಸೆತದ ಸಾಮರ್ಥ್ಯವನ್ನು ಕೋಚ್ ಟೋನಿ ಪ್ರಸನ್ನ ಗುರುತಿಸಿ ಜಾವೆಲಿನ್ ಎಸೆತದತ್ತ ಅವರನ್ನು ಕರೆತಂದರು.
ಕ್ರಿಕೆಟ್ನಲ್ಲಿ ವೇಗವಾಗಿ ಚೆಂಡೆಸೆಯುತ್ತಿದ್ದ ಅದೇ ಕೈ ಇದೀಗ ಜಾಗತಿಕ ಅಥ್ಲೆಟಿಕ್ಸ್ ವೇದಿಕೆಯಲ್ಲಿ ಶ್ರೀಲಂಕಾಕ್ಕೆ ಚಿನ್ನದ ಗೌರವ ತಂದುಕೊಟ್ಟಿದೆ. ಐತಿಹಾಸಿಕ ಗೆಲುವಿನ ಬಳಿಕ ಮಾತನಾಡಿದ ಪತಿರಾಗೆ, ಸಣ್ಣ ದೇಶವಾದ ಶ್ರೀಲಂಕಾದಿಂದ ಬಂದು ಇಂತಹ ದೊಡ್ಡ ಜಾಗತಿಕ ವೇದಿಕೆಯಲ್ಲಿ ಚಾಂಪಿಯನ್ ಆಗಿರುವುದು ಅಪಾರ ಸಂತಸ ತಂದಿದೆ ಎಂದು ಹೇಳಿದ್ದಾರೆ. ಡೈಮಂಡ್ ಲೀಗ್ ಗೆಲುವಿನೊಂದಿಗೆ ಪತಿರಾಗೆ ಮುಂಬರುವ ಏಷ್ಯನ್ ಗೇಮ್ಸ್ನಲ್ಲೂ ಪದಕದ ಪ್ರಮುಖ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.