ಬೆಂಗಳೂರು, ಸೆ. 06 (DaijiworldNews/AA): ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಹೆಸರು ಬದಲಾಗುವುದಿಲ್ಲ ಎಂದು ತಂಡದ ನೂತನ ಚೇರ್ಮನ್ ಆರ್ಯಮನ್ ಬಿರ್ಲಾ ಅಧಿಕೃತವಾಗಿ ತಿಳಿಸಿದ್ದಾರೆ.

ಆರ್ಸಿಬಿ ತಂಡದ ಹೆಸರು ಬದಲಾಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿತ್ತು. ಇತ್ತೀಚೆಗೆ ನಡೆದ ಮಾಧ್ಯಮ ಸಂವಾದದಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ ಆರ್ಯಮನ್ ಬಿರ್ಲಾ, "ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರನ್ನು ಬದಲಿಸುವುದಿಲ್ಲ. ಅಂತಹ ಯಾವುದೇ ಆಲೋಚನೆ ನಮ್ಮ ಮುಂದಿಲ್ಲ. ನಮಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬ ಹೆಸರು ತುಂಬಾ ಇಷ್ಟ. ನಾವು ಇದೇ ಹೆಸರನ್ನು ಮುಂದುವರಿಸಲಿದ್ದೇವೆ. ಹಾಗಾಗಿ ಹೆಸರು ಬದಲಾವಣೆಯ ವದಂತಿಗಳಿಗೆ ಇಲ್ಲಿಗೆ ತೆರೆ ಬೀಳಬೇಕು" ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.
"ಆರ್ಸಿಬಿ ಎನ್ನುವುದು ಕೇವಲ ಒಂದು ತಂಡವಲ್ಲ, ಅದು ಕೋಟ್ಯಂತರ ಅಭಿಮಾನಿಗಳ ಭಾವನೆಯಾಗಿದೆ. ಈ ಬ್ರ್ಯಾಂಡ್ ಹೊಂದಿರುವ ಜನಪ್ರಿಯತೆ ಮತ್ತು ಸಮುದಾಯದ ಪ್ರೀತಿಯನ್ನು ನಾವು ಗೌರವಿಸುತ್ತೇವೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಮುಂದುವರೆಯಲಿದೆ" ಎಂದು ಅವರು ಹೇಳಿದ್ದಾರೆ.