ಬೆಂಗಳೂರು, ಸೆ 23(DaijiworldNews/SM): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ 9 ವಿಕೆಟ್ ಗಳಿಂದ ಭಾರತವನ್ನು ಸೋಲಿಸುವ ಮೂಲಕ ಮೂರನೇ ಪಂದ್ಯವನ್ನು ಗೆದ್ದುಕೊಂಡಿದೆ. ಆ ಮೂಲಕ ಸರಣಿಯನ್ನು ಸಮಬಲಗೊಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ನಿಗದಿತ ಇಪ್ಪತ್ತು ಓವರ್ ಗಳಲ್ಲಿ 134 ರನ್ ಗಳನ್ನಷ್ಟೇ ಪೇರಿಸಲು ಶಕ್ತವಾಯಿತು. ಆರಂಭಿಕ ರೋಹಿತ್ ಶರ್ಮಾ ಮತ್ತೊಮ್ಮೆ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಶಿಖರ್ ಧವನ್ 36ರನ್ ಗಳನ್ನು ಪೇರಿಸಿದರು. ಉಳಿದಂತೆ ಯಾವೊಬ್ಬ ಆಟಗಾರನಿಂದಲೂ ನಿರೀಕ್ಷಿತ ಪ್ರದರ್ಶನ ಸಿಗಲಿಲ್ಲ. ಅಂತಿಮವಾಗಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 134 ರನ್ ಗಳನ್ನು ಪೇರಿಸಿ ದ. ಆಫ್ರಿಕಾಕ್ಕೆ ಗೆಲ್ಲಲು 135 ರನ್ ಗಳ ಗುರಿ ನಿಗದಿಪಡಿಸಿತು.
ಇನ್ನು ಈ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ದ. ಆಫ್ರಿಕಾ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪುವಲ್ಲಿ ಯಶಸ್ವಿಯಾಯಿತು. ದ. ಆಫ್ರಿಕಾ ಪರ ಡಿ ಕಾಕ್ ಭರ್ಜರಿ 5 ಸಿಕ್ಸರ್ ನೆರವಿನಿಂದ 79 ರನ್ ಸಿಡಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಆ ಮೂಲಕ ಮೂರು ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.