ನವದೆಹಲಿ, ಸೆ 24 (DaijiworldNews/SM): ಟೀಂ ಇಂಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿ ಸ್ಥಾನಕ್ಕೆ ರಿಷಬ್ ಪಂತ್ ಅವರನ್ನು ಸೇರ್ಪಡೆಗೊಳಿಸಿ ಆಡಿಸಲಾಗುತ್ತಿದೆ. ಆದರೆ, ಪಂತ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಅವರನ್ನು ಬ್ಯಾಟಿಂಗ್ ಗೆ ಇಳಿಸಲಾಗುತ್ತಿದೆ. ಆದರೆ, ನಿರೀಕ್ಷೆಯಷ್ಟು ಪ್ರದರ್ಶನ ಪಂತ್ ಅವರ ಬ್ಯಾಟ್ ನಿಂದ ಕಾಣುತ್ತಿಲ್ಲ. ಆದರೆ, ಟೀಂ ಇಂಡಿಯಾಕ್ಕೆ ವಿಕೆಟ್ ಕೀಪರ್ ಅಗತ್ಯವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಕೆಳ ಕ್ರಮಾಂಕದಲ್ಲೇ ಆಡಲು ಅವಕಾಶ ನೀಡಿ ಎಂದು ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್ ಮನ್ ವಿವಿಎಸ್ ಲಕ್ಷ್ಮಣ್ ಸಲಹೆ ನೀಡಿದ್ದಾರೆ.
ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಹಲವು ಬ್ಯಾಟ್ಸ್ ಮನ್ ಗಳು ವಿಫಲರಾದ ಬಳಿಕ ರಿಷಭ್ ಪಂತ್ ಅವರನ್ನು ನಾಲ್ಕನೇ ಕ್ರಮಾಂಕ್ದಲ್ಲಿ ಕಣಕ್ಕಿಳಿಸಲಾರಂಭಿಸಿದರು. ಆದರೆ, ಸೀಮಿತ ಓವರ್ ಗಳ ಪಂದ್ಯದಲ್ಲಿ ಅವರೂ ಕೂಡ ಯಶಸ್ವಿಯಾಗಲಿಲ್ಲ. ಕಳಪೆ ಶಾಟ್ ಗಳಿಗೆ ಬ್ಯಾಟ್ ವೊಡ್ಡಿ ಯಶಸ್ವಿ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ.
ರಿಷಭ್ ಪಂತ್ ಸ್ವಾಭಾವಿಕವಾಗಿ ಸ್ಪೋಟಕ ಬ್ಯಾಟ್ಸ್ ಮನ್. ಕಳೆದ ಐಪಿಎಲ್ ಆವೃತ್ತಿಯಲ್ಲಿ ಪಂತ್ ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಸರಾಸರಿ 45 ರಷ್ಟು ಯಶಸ್ವಿಯಾಗಿದ್ದರು. ಆದರೆ, ಈ ಫಾರ್ಮುಲ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ವರ್ಕೌಟ್ ಆಗುತಿಲ್ಲ ಎಂಬುವುದಾಗಿ ಲಕ್ಷ್ಮಣ್ ಪ್ರತಿಕ್ರಿಯೆ ನೀಡಿದ್ದಾರೆ.
ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ನಾಲ್ಕನೇ ಕ್ರಮಾಂಕಕ್ಕೆ ಸೂಕ್ತ ಬ್ಯಾಟ್ಸ್ ಮನ್ ಆಗಿದ್ದಾರೆ ಎಂದು ವಿವಿಎಸ್ ಲಕ್ಷ್ಮಣ್ ಪ್ರತಿಕ್ರಿಯೆ ನೀಡಿದ್ದಾರೆ. ದೇಶಿ ಆಟಗಾರರೊಂದಿಗೆ ಹಾಗೂ ವಿದೇಶಿ ಆಟಗಾರರೊಂದಿಗೆ ಆಡುವ ಪಂದ್ಯಗಳಿಗೆ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಅವರು ತಿಳಿಸಿದ್ದಾರೆ.