ನವದೆಹಲಿ, ಸೆ 26 (DaijiworldNews/SM): ೨೦೧೯ರ ಮೇ ತಿಂಗಳಲ್ಲಿ ನಡೆದ ಐಸಿಸಿ ವಿಶ್ವಕಪ್ ಭಾರತ ಗೆಲ್ಲುತ್ತದೆ ಎಂಬುವುದಾಗಿ ಹಲವು ಮಂದಿ ಭವಿಷ್ಯ ನುಡಿದಿದ್ದರು. ಆದರೆ, ಅದು ಹುಸಿಯಾಗಿತ್ತು. ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಗತಿ ಬದಲಾಯಿತು. ಗೆಲುವಿನ ನಾಗಲೋಟದಲ್ಲಿದ್ದ ತಂಡ ಸೆಮೀಸ್ ನಲ್ಲಿ ಎಡವಿತ್ತು. ಟೀಂ ಇಂಡಿಯಾವನ್ನು ದಡ ಸೇರಿಸಲು ಧೋನಿ ವಿಫಲರಾಗಿದ್ದರು. ಜೀವಂತವಾಗಿದ್ದ ಪಂದ್ಯವನ್ನು ಕೈಚೆಲ್ಲಿ ಕೊಟ್ಯಾಂತರ ಅಭಿಮಾನಿಗಳಲ್ಲಿ ನಿರಾಸೆಯನ್ನು ಮೂಡಿಸಿದ್ದರು. ಆ ಬಳಿಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಅಂಗಳದಲ್ಲಿ ಕಾಣಿಸಲೇ ಇಲ್ಲ. ಕ್ರಿಕೆಟ್ ಗೆ ಎರಡು ತಿಂಗಳ ವಿಶ್ರಾಂತಿಯನ್ನು ಪಡೆದುಕೊಂಡು ದೇಶ ಸೇವೆಯತ್ತ ಚಿತ್ತ ಹರಿಸಿದ್ದರು. ಎರಡು ತಿಂಗಳ ಬಳಿಕ ಕ್ರಿಕೆಟ್ ಮೈದಾನದಲ್ಲಿ ಧೋನಿಯಾಟ ಕಾಣಬಹುದೆಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ.
ಮತ್ತೆರಡು ತಿಂಗಳುಗಳ ಕಾಲ ಎಂಎಸ್ ಡಿ ವಿಶ್ರಾಂತಿ ಪಡೆಯಲಿದ್ದಾರೆ. ಆದರೆ, ಧೋನಿ ಅನುಪಸ್ಥಿತಿ ಟೀಂ ಇಂಡಿಯಾದಲ್ಲಿ ಹಲವು ವಿಚಾರಗಳಲ್ಲಿ ಎದ್ದು ಕಾಣುತ್ತಿದೆ. ಧೋನಿ ಇಲ್ಲದಿರುವ ತಂಡದಲ್ಲಿ ಹಲವು ಎಡವಟ್ಟುಗಳಾಗುತ್ತಿವೆ. ಇನ್ನು ವಿಶ್ವಕಪ್ ಬಳಿಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸುತ್ತಾರೆ ಎಂದೇ ಎಲ್ಲರು ನಿರೀಕ್ಷಿಸಿದ್ದರು. ಆದರೆ, ಇದುವರೆಗೂ ಧೋನಿ ಅಂತಹ ನಿರ್ಧಾರವನ್ನು ಕೈಗೊಂಡಿಲ್ಲ. ಆದರೆ, ಇತ್ತ ಕ್ರಿಕೆಟ್ ಮೈದಾನದಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಕ್ಯಾಪ್ಟನ್ ಕೂಲ್ ಕೂಲಾಗಿಯೇ ಡಿಶಿಷನ್ ಪೆಂಡಿಂಗ್ ಇರಿಸಿದ್ದಾರೆ.
ಇನ್ನು ವಿಶ್ವಕಪ್ ಬಳಿಕ ಧೋನಿ 2 ತಿಂಗಳ ವಿಶ್ರಾಂತಿ ಮೊರೆ ಹೋಗಿದ್ದಾರೆ ಎಂದು ಬಿಸಿಸಿಐ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ವೆಸ್ಟ್ ಇಂಡೀಸ್ ಪ್ರವಾಸ ಮತ್ತು ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗಿಡಲಾಗಿತ್ತು. ಬಳಿಕ ಅವರು ಲಭ್ಯರಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ಮತ್ತೆ ಹೆಚ್ಚುವರಿಯಾಗಿ ಅವರು 2 ತಿಂಗಳಿಗೆ ವಿಸ್ತರಿಸಿದ್ದಾರೆ. ಸದ್ಯ ಇದರ ಹೊರತಾಗಿ ಯಾವುದೇ ಮಾಹಿತಿಗಳನ್ನು ಧೋನಿಯಾಗಲಿ, ಬಿಸಿಸಿಐ ಆಗಲಿ ಲೀಕ್ ಮಾಡಿಲ್ಲ. ಆದರೆ, ಈ ನಿರ್ಧಾರದ ಹಿಂದೆ ಯಾವುದೋ ಬಲವಾದ ಕಾರಣ ಅಡಕವಾಗಿದೆ ಎನ್ನಲಾಗುತಿದೆ.
ಒಂದು ಮೂಲಗಳ ಪ್ರಕಾರ ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಬೆನ್ನು ನೋವು, ಬೋನು ನೋವು, ಅಂಗೈ ನೋವಿನಿಂದ ಧೋನಿ ಬಳಲುತ್ತಿದ್ದಾರೆ ಎನ್ನಲಾಗಿದೆ. ಇದೇ ಕಾರಣದಿಂದಾಗಿ ವಿಶ್ರಾಂತಿಯಲ್ಲಿದ್ದಾರೆ ಎಂಬುವುದಾಗಿ ಹೇಳಲಾಗುತ್ತಿದೆ. ಆದರೆ, ಬಿಸಿಸಿಐ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಆದರೆ, ಸದ್ಯ ಟೀಂ ಇಂಡಿಯಾ ಕ್ರಿಕೆಟ್ ಗೆ ಮಹೇಂದ್ರ ಸಿಂಗ್ ಧೋನಿ ಅಲಭ್ಯರಾಗಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಐಸಿಸಿ ಟಿ-೨೦ ವಿಶ್ವಕಪ್ ನಲ್ಲಿ ಧೋನಿ ಆಡಲಿದ್ದಾರಾ ಎಂಬುವುದು ಅಭಿಮಾನಿಗಳ ಕುತೂಹಲ.