ನವದೆಹಲಿ, ಸೆ 27(DaijiworldNews/SM): ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದ ಟೀಂ ಇಂಡಿಯಾದ ಎಡಗೈ ಬ್ಯಾಟ್ಸ್ ಮನ್ ಹಾಗೂ ಆಲ್ ರೌಂಡರ್ ಆಟಗಾರ ಸುರೇಶ್ ರೈನಾಗೆ ಸದ್ಯ ತಂಡದಲ್ಲಿ ಯಾವುದೇ ಅವಕಾಶಗಳಿಲ್ಲ. ಕಳೆದ ಒಂದು ವರ್ಷದಿಂದ ಟೀಂ ಇಂಡಿಯಾದಿಂದ ರೈನಾ ದೂರವಾಗಿದ್ದಾರೆ. ಹಾಗಿದ್ದರೂ ಕೂಡ ಮತ್ತೆ ತಂಡದಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಕಳೆದ 2018ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಟಿ-20 ಪಂದ್ಯದಲ್ಲಿ ಆಡಿದ್ದ ಸುರೇಶ್ ರೈನಾ ಅವರು ಮತ್ತೇ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಟೀಂ ಇಂಡಿಯಾದ ಸೀಮಿತ ಓವರ್ ನ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಸರಿಯಾದ ಆಟಗಾರರಿಲ್ಲದ ಹಿನ್ನೆಲೆಯಲ್ಲಿ ಆ ಸ್ಥಾನವನ್ನು ತಾನು ನಿಭಾಯಿಸುವುದಾಗಿ ರೈನಾ ಹೇಳಿಕೊಂಡಿದ್ದಾರೆ.
ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಸಿದ್ಧತೆಯಲ್ಲಿದೆ. ಹೀಗಿರುವಾಗ ನಾಲ್ಕನೇ ಕ್ರಮಾಂಕವನ್ನು ಸುಧಾರಿಸಿಕೊಳ್ಳುವ ಅಗತ್ಯತೆ ಕೊಹ್ಲಿ ನೇತೃತ್ವದ ತಂಡಕ್ಕಿದೆ. ಇದೇ ಕಾರಣದಿಂದ ಸುರೇಶ್ ರೈನಾ ವಿಶ್ವಾಸ ವ್ಯಕ್ತಪಡಿಸಿದ್ದು, ಒಂದೊಮ್ಮೆ ಅವಕಾಶ ಸಿಕ್ಕಿದ್ದಲ್ಲಿ ತನ್ನ ಸಾಮಾರ್ಥ್ಯ ಪ್ರದರ್ಶನಕ್ಕೆ ಸಿದ್ಧ ಎಂದಿದ್ದಾರೆ.
ಪ್ರಸ್ತುತ ಟೀಂ ಇಂಡಿಯಾಕ್ಕೆ ನಾಲ್ಕನೇ ನಂಬರ್ ಅನ್ ಲಕ್ಕಿ ಎಂಬಂತಿದೆ. ಐಸಿಸಿ ವಿಶ್ವಕಪ್ಗೂ ಮುನ್ನ ಅಂಬಾಟಿ ರಾಯುಡು ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ, ಅವರು ತಮ್ಮ ಸಾಮಾರ್ಥ್ಯ ಪ್ರದರ್ಶನಕ್ಕೆ ವಿಫಲರಾಗಿದ್ದರು.
ವಿಶ್ವಕಪ್ ಟೂರ್ನಿಯಲ್ಲಿ ವಿಜಯ್ ಶಂಕರ್ ಅವರಿಗೆ ನೀಡಲಾಗಿತ್ತು. ಗಾಯದ ಸಮಸ್ಯೆಯಿಂದಾಗಿ ಅವರು ತಂಡದಿಂದ ಹೊರಗುಳಿದಿದ್ದಾರೆ.
ಇದೀಗ ರಿಷಭ್ ಪಂತ್ ಅವರಿಗೆ ನಾಲ್ಕನೇ ಕ್ರಮಾಂಕ ನೀಡಲಾಗಿದೆ. ಆದರೆ, ರಿಷಭ್ ಪಂತ್ ಕೂಡ ನಾಲ್ಕನೇ ಕ್ರಮಾಂಕದಲ್ಲಿ ನಿರೀಕ್ಷೆಯ ಪ್ರದರ್ಶನ ನೀಡುತ್ತಿಲ್ಲ. ನಾಲ್ಕನೇ ಕ್ರಮಾಂಕವೇ ವಿರಾಟ್ ಗೆ ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ.