ವಿಶಾಖಪಟ್ಟಣಂ, ಅ 02 (DaijiworldNews/SM): ಟಿ-20 ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚುತ್ತಿರುವ ಟೀಂ ಇಂಡಿಯಾದ ಆರಂಭಿಕ ಆಟಗಾರ ಹಿಟ್ ಮ್ಯಾನ್ ಟೆಸ್ಟ್ ಕ್ರಿಕೆಟ್ ನಲ್ಲೂ ತನ್ನ ಸಾಮಾರ್ಥ್ಯ ಪ್ರದರ್ಶಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಆರಂಭಿಕನಾಗಿ ಆಡಲು ದೊರೆತ ಚೊಚ್ಚಲ ಇನ್ನಿಂಗ್ಸ್ ನಲ್ಲಿಯೇ ಶತಕ ಸಿಡಿಸಿ ಮಿಂಚಿದ್ದಾರೆ.
ಆರಂಭಿಕನಾಗಿ ಆಡಿದ ಮೊದಲನೇ ಇನಿಂಗ್ಸ್ನಲ್ಲಿಯೇ ಶತಕ ಸಿಡಿಸಿದ ಭಾರತದ ನಾಲ್ಕನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಇದೀಗ ಹಿಟ್ ಮ್ಯಾನ್ ರೋಹಿತ್ ಪಾತ್ರರಾಗಿದ್ದಾರೆ. ಈ ಮೂಲಕ ಟೆಸ್ಟ್ ವೃತ್ತಿ ಜೀವನದ ನಾಲ್ಕನೇ ಶತಕ ಪೂರೈಸಿದ್ದಾರೆ.
ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಉತ್ತಮ ಆರಂಭವನ್ನು ಪಡೆದುಕೊಂಡಿತು.
ಭಾರತದ ಪರ 174 ಎಸೆತ ಎದುರಿಸಿದ ರೋಹಿತ್ ಅಜೇಯ 115ರನ್ ಗಳಿಸಿದರೆ, ಅಗರ್ವಾಲ್ 183 ಎಸೆತಗಳನ್ನು ಎದುರಿಸಿ ಅಜೇಯ 84 ರನ್ ಗಳ ಮೂಲಕ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅಂತಿಮವಾಗಿ 58 ಓವರ್ಗಳಿಗೆ ವಿಕೆಟ್ ನಷ್ಟವಿಲ್ಲದೇ 202 ರನ್ ಗಳಿಸಿದ್ದು, ಮಳೆಯಿಂದಾಗಿ ಪಂದ್ಯ ವಿಳಂಬವಾಗಿದೆ.