ವಿಶಾಖಪಟ್ಟಣಂ,ಅ 03 (DaijiworldNews/SM): ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಈ ನಡುವೆ ಆರಂಭಿಕ ಆಟಗಾರರು ಮಿಂಚಿದ್ದಾರೆ. ದ್ವಿಶತಕದತ್ತ ಮುನ್ನುಗ್ಗುತ್ತಿದ್ದ ರೋಹಿತ್ ಶರ್ಮಾ ಓಟಕ್ಕೆ ದಕ್ಷಿಣ ಆಫ್ರಿಕ ಬೌಲರ್ ಗಳು ಕಡಿವಾಣ ಹಾಕಿದ್ದಾರೆ. ಆದರೆ, ಕನ್ನಡಿಗ ಮಾಯಾಂಕ್ ಅಗರವಾಲ್ ಅವರ ಓಟಕ್ಕೆ ಕಡಿವಾಣ ಹಾಕಲು ದ. ಆಫ್ರಿಕಾ ಬೌಲರ್ ಗಳು ವಿಫಲರಾಗಿದ್ದಾರೆ. ಆ ಮೂಲಕ ದ್ವಿಶತಕ ಸಿಡಿಸಿ ಅಗರವಾಲ್ ಮಿಂಚಿದ್ದಾರೆ.
ಆರಂಭಿಕರಾಗಿ ರೋಹಿತ್ ಜತೆ ಪಂದ್ಯ ಆರಂಭಿಸಿದ್ದ ಅಗರವಾಲ್ 6 ಸಿಕ್ಸರ್, 23 ಬೌಂಡರಿ ಸೇರಿದಂತೆ ಅಜೇಯ 215 ರನ್ ಪೇರಿಸಿ ಮಿಂಚಿದ್ದಾರೆ. ಇನ್ನು ಆಡಿದ 8ನೇ ಇನ್ನಿಂಗ್ಸ್ ನಲ್ಲೇ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಇನ್ನು ದ್ವಿಶತಕದತ್ತ ಮುನ್ನುಗ್ಗುತ್ತಿದ್ದ ರೋಹಿತ್ ಓಟಕ್ಕೆ ಆಫ್ರಿಕಾನ್ ಬೌಲರ್ ಗಳು 176 ರನ್ ಗಳಿಗೆ ತಲುಪುವಷ್ಟರಲ್ಲಿ ಬ್ರೇಕ್ ಹಾಕಿದರು. ಬಳಿಕ ಬಂದ ಚೇತೇಶ್ವರ ಪೂಜಾರ ಅವರಿಗೂ ಕೂಡ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲು ಆಫ್ರಿಕನ್ ಬೌಲರ್ ಗಳು ಅವಕಾಶ ನೀಡಲಿಲ್ಲ.
ಅಂತಿಮವಾಗಿ 136 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡ ಭಾರತ 502ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು.