ಪುಣೆ, ಅ 13 (DaijiworldNews/SM): ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಕೂಡ ಭಾರತ ಗೆಲುವಿನ ನಗೆ ಬೀರಿದೆ. ಟೀಂ ಇಂಡಿಯಾದ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ ಆಫ್ರಿಕಾ ಎರಡನೇ ಪಂದ್ಯದಲ್ಲಿ ಭಾರತಕ್ಕೆ ಶರಣಾಗಿದೆ.
ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಮತ್ತು 137 ರನ್ ಗಳಿಂದ ಗೆಲುವಿನ ನಗೆ ಬೀರಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 601 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಬಳಿಕ ಈ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 275 ರನ್ ಗಳಿಗೆ ಆಲೌಟ್ ಆಗಿ ಫಾಲೋ ಆನ್ ಗೆ ಸಿಲುಕಿತ್ತು. ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಫ್ರಿಕಾ 189 ರನ್ ಗಳಿಗೆ ಆಲೌಟ್ ಆಗಿ ಎರಡನೇ ಪಂದ್ಯದಲ್ಲೂ ಕೂಡ ಭಾರತಕ್ಕೆ ಶರಣಾಗಿದೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಫಾಲೋ ಆನ್ಗೆ ಸಿಲುಕಿ ದ್ವಿತೀಯ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ 67.2 ಓವರ್ ಗಳಲ್ಲಿ 189 ರನ್ ಗಳಿಸಿ ಸರ್ವ ಪತನ ಕಂಡಿತು. ಇದರೊಂದಿಗೆ ತವರು ನೆಲದಲ್ಲಿ ಭಾರತ ತಂಡ ಸತತ 11 ಸರಣಿ ಗೆದ್ದು ವಿಶೇಷ ಸಾಧನೆ ಮಾಡಿತು.
ಇನ್ನು ಭಾರತದ ಪರ ಎರಡೂ ಇನ್ನಿಂಗ್ಸ್ ನಲ್ಲಿ ಉಮೇಶ್ ಯಾದವ್ ಹಾಗೂ ರವಿಚಂದ್ರನ್ ಅಶ್ವಿನ್ ತಲಾ 6 ವಿಕೆಟ್ ಗಳನ್ನು ಪಡೆದರು.