ರಾಂಚಿ, ಅ 21 (DaijiworldNews/SM): ಭಾರತದ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ರನ್ ಗಳಿಸಲು ಪರದಾಡಿದ ದ. ಆಫ್ರಿಕಾ ತಂಡ ಕೊನೆಗೂ ಸೋಲೊಪ್ಪಿಕೊಂಡಿದೆ. ಭಾರತ ನೀಡಿದ ಬೃಹತ್ ಮೊತ್ತದ ಗುರಿ ತಲುಪಲಾಗದೆ, ಇನ್ನಿಂಗ್ಸ್ ಹಾಗೂ ೨೦೨ ರನ್ ಗಳ ಹೀನಾಯ ಸೋಲನುಭವಿಸಿದೆ. ಆ ಮೂಲಕ ೩-೦ ಅಂತರದಿಂದ ಸರಣಿ ಭಾರತದ ಪಾಲಾಗಿದೆ.
ಮೊದಲೆರಡು ಪಂದ್ಯ ಗೆದ್ದ ಉತ್ಸಾಹದಲ್ಲಿದ್ದ ಟೀಂ ಇಂಡಿಯಾ ಮೂರನೇ ಪಂದ್ಯವನ್ನು ಉತ್ಸಾಹದಿಂದಲೇ ಆರಂಭಿಸಿತು. ಆರಂಭದಲ್ಲೇ ಭರ್ಜರಿ ಪ್ರದರ್ಶನ ನೀಡಿದ ಭಾರತ ತಂಡ ಬೃಹತ್ ಮೊತ್ತ ಕಲೆ ಹಾಕಿತು. ಭಾರತದ ಪರ ರೋಹಿತ್ ಶರ್ಮಾ ದ್ವಿಶತಕ ಹಾಗೂ ಅಜಿಂಕ್ಯಾ ರಹಾನೆ ಶತಕ ಸಿಡಿಸಿ ಸಂಭ್ರಮಿಸಿದರು. ೯ ವಿಕೆಟ್ ಗಳನ್ನು ಕಳೆದುಕೊಂಡಿದ್ದ ಸಂದರ್ಭ ೪೯೭ ರನ್ ಗಳಿಸಿದ್ದ ಭಾರತ ಡಿಕ್ಲೇರ್ ಮಾಡಿಕೊಂಡಿತು.
ಭಾರತ ನೀಡಿದ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿದ ದ.ಆಫ್ರಿಕಾ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಭಾರತೀಯ ಬೌಲರ್ ಗಳ ಮಾರಕ ದಾಳಿಗೆ ರನ್ ಪೇರಿಸಲು ಪರದಾಡಿದರು. ಅಂತಿಮವಾಗಿ ೧೬೨ ರನ್ ಗಳಿಗೆ ದ. ಆಫ್ರಿಕಾ ತಂಡ ತನ್ನ ಮೊದಲ ಇನ್ನಿಂಗ್ಸ್ ಮುಕ್ತಾಯಗೊಳಿಸಿತು.
ಬಳಿಕ ಎರಡನೇ ಇನ್ನಿಂಗ್ಸ್ ಶುರು ಮಾಡಿದ ದ. ಆಫ್ರಿಕಾ ತಂಡ ಮತ್ತೆ ಆರಂಭದಲ್ಲೇ ಮುಗ್ಗರಿಸಿತು. ಬಂದಷ್ಟೇ ವೇಗದಲ್ಲಿ ಬ್ಯಾಟ್ಸ್ ಮನ್ ಗಳು ಫೆವೀಲಿಯನ್ ನತ್ತ ಹೆಜ್ಜೆ ಹಾಕಿದರು. ಎರಡನೇ ಇನ್ನಿಂಗ್ಸ್ ನಲ್ಲಿ ೧೩೩ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಫ್ರಿಕಾ ಭಾರತಕ್ಕೆ ಶರಣಾಯಿತು.