ಮುಂಬೈ, ಅ 23 (DaijiworldNews/SM):ವಾರದ ಹಿಂದೆ ಬಿಸಿಸಿಐಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಇಂದು ಅಧಿಕೃತವಾಗಿ ಹುದ್ದೆ ಸ್ವೀಕರಿಸಿದ್ದಾರೆ. ಬಿಸಿಸಿಐನ 39ನೇ ಅಧ್ಯಕ್ಷರಾಗಿ ಬುಧವಾರ ಪದಗ್ರಹಣಗೊಂಡಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಮುಂದಾಳುತ್ವವನ್ನು ಮುಂದಿನ 11 ತಿಂಗಳವರೆಗೆ ಸೌರವ್ ಗಂಗೂಲಿಯವರಿಗೆ ವಹಿಸುವುದೆಂದು ಇತ್ತೀಚಿನ ಬಿಸಿಸಿಐ ಸಾಮಾನ್ಯ ಮಂಡಳಿ ಸಭೆಯಲ್ಲಿ ನಿರ್ಧರಿಸಿತ್ತು. ಈ ನಡುವೆಯೇ ಗಂಗೂಲಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.ಈ ಮೂಲಕ ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ಆಡಳಿತಾಧಿಕರಿಗಳ ಸಮಿತಿಯ ಆಳ್ವಿಕೆ ಅಂತ್ಯಗೊಂಡಿದೆ.
ಭಾರತೀಯ ಆಟಗಾರನಾಗಿ ಸೇವೆ ಸಲ್ಲಿಸಿದವರ ಪೈಕಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವವರಲ್ಲಿ ಗಂಗೂಲಿ ಎರಡನೆಯವರು. ಈ ಹಿಂದೆ ವಿಜಯನಗರದ ಮಹಾರಾಜರು ಅಧ್ಯಕ್ಷರಾಗಿದ್ದರು. ಮುಂದಿನ ವರ್ಷದ ಸಪ್ಟೆಂಬರ್ ತಿಂಗಳವರೆಗೆ ಸೌರವ್ ಬಿಸಿಸಿಐ ಅಧ್ಯಕ್ಷರಾಗಿರಲಿದ್ದಾರೆ.
ಬಿಸಿಸಿಐ ಮಾಜಿ ಅಧ್ಯಕ್ಷ ಮತ್ತು ಪ್ರಸ್ತುತ ಕಿರಿಯ ಹಣಕಾಸು ಸಚಿವ ಅನುರಾಗ್ ಠಾಕೂರ್ ಅವರ ಕಿರಿಯ ಸೋದರ ಅರುಣ್ ಧುಮಾಲ್ ಖಜಾಂಚಿ ಮತ್ತು ಕೇರಳದ ಜಯೇಶ್ ಜಾರ್ಜ್ ಜಂಟಿ ಕಾರ್ಯದರ್ಶಿಯಾಗಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಕಾರ್ಯದರ್ಶಿಯಾಗಿದ್ದಾರೆ.
ಕೊಹ್ಲಿ ಜತೆ ಮಾತುಕತೆ ಬೆಂಬಲದ ಭರವಸೆ:
ಇನ್ನು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಗಂಗೂಲಿ, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಜತೆ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ. ಹಾಗೂ ಎಷ್ಟರ ಮಟ್ಟಿಗೆ ನನಗೆ ಸಾಧ್ಯವಿದೆ ಅಷ್ಟರ ಮಟ್ಟಿಗೆ ಕೊಹ್ಲಿಗೆ ಬೆಂಬಲ ನೀಡುತ್ತೇನೆ ಎಂಬುವುದಾಗಿ ಗಂಗೂಲಿ ತಿಳಿಸಿದ್ದಾರೆ.
ಪ್ರಸ್ತುತ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ನಾವೆಲ್ಲರು ಅವರೊಂದಿಗೆ ಇದ್ದೇವೆ ಎಂದು ಬಿಸಿಸಿಐನ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ.