ನವದೆಹಲಿ, ನ 04 (DaijiworldNews/SM): ಇಲ್ಲಿನ ಅರುಣ್ ಜೆಟ್ಲಿ ಮೈದಾನದಲ್ಲಿ ಬಾಂಗ್ಲಾ ದೇಶ ವಿರುದ್ಧದ ಮೊದಲ ಟಿ-20 ಪಂದ್ಯವನ್ನು ಟೀಂ ಇಂಡಿಯಾ 7 ವಿಕೆಟ್ ಗಳಿಂದ ಹೀನಾಯವಾಗಿ ಸೋತುಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಆರಂಬದಲ್ಲಿ ಆಘಾತ ಎದುರಾಯಿತು. ಆರಂಭಿಕ ಆಟಗಾರ ನಾಯಕ ರೋಹಿತ್ ಆಟ ಬಾಂಗ್ಲಾ ಬೌಲರ್ ಗಳ ಮುಂದೆ ನಡೆಯಲಿಲ್ಲ. ಕೇವಲ 9 ರನ್ ಗಳಿಸಿರುವಾಗಲೇ ಬಾಂಗ್ಲಾ ಬೌಲರ್ ಗಳು ರೋಹಿತ್ ರನ್ನು ಫೆವೀಲಿಯನ್ ಗೆ ಅಟ್ಟಿದರು. ಬಳಿಕ ತಂಡಕ್ಕೆ ಆಸರೆಯಾದವರು ಶಿಖರ್ ಧವನ್. ಎದುರಿಸಿದ 42 ಎಸೆತ ಗಳಲ್ಲಿ 41 ರನ್ ಗಳ ಕೊಡುಗೆ ನೀಡಿ ತಂಡವನ್ನು ಸಂಕಷ್ಟದಿಂದ ಮೇಲಕ್ಕೆತ್ತಿದರು.
ಬಳಿಕ ರಾಹುಲ್ 15, ಶ್ರೇಯಸ್ 22, ರಿಷಬ್ ಪಂತ್ 27 ರನ್ ಗಳ ನೆರವಿನಿಂದ ಟೀಂ ಇಂಡಿಯಾ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಗಳನ್ನು ಗಳಿಸಲು ಶಕ್ತವಾಯಿತು.
ಭಾರತ ನೀಡಿದ ಸಾಧಾರಣ ಗುರಿಯನ್ನು ಬೆನ್ನತ್ತಿದ ಬಾಂಗ್ಲಾ ತಂಡಕ್ಕೆ ಕೂಡ ಆರಂಭದಲ್ಲೇ ಆಘಾತ ಎದುರಾಗಿತ್ತು. ಆರಂಭಿಕ ಲಿಟನ್ ದಾಸ್ ೭ ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಸೌಮ್ಯ ಸರ್ಕಾರ್ ಹಾಗೂ ಮುಶ್ಫಿಕ್ಕರ್ ರೆಹಮಾನ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಸೌಮ್ಯ ಸರ್ಕಾರ್ 39 ಹಾಗೂ ಮುಶ್ಫಿಕ್ಕರ್ ರೆಹಮಾನ್ 60 ರನ್ ಗಳ ಕೊಡುಗೆ ತಂಡಕ್ಕೆ ನೀಡಿದರು.
ಅಂತಿಮವಾಗಿ 19.3 ಓವರ್ ಗಳಲ್ಲಿ ಬಾಂಗ್ಲಾ ತಂಡ 3 ವಿಕೆಟ್ ಗಳ ನಷ್ಟಕ್ಕೆ 154 ರನ್ ಗಳನ್ನು ಗಳಿಸಿ ಗೆಲುವಿನ ನಗೆ ಚೆಲ್ಲಿತು.