ರಾಜ್ ಕೋಟ್, ನ. 07 (DaijiworldNews/SM): ಬಾಂಗ್ಲಾದೇಶ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಹಿಟ್ ಮ್ಯಾನ್ ರೋಹಿತ್ ಎರಡನೇ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ನಾಯಕ ರೋಹಿತ್ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ್ದಾರೆ. ಆ ಮೂಲಕ ಸರಣಿ ಗೆಲ್ಲುವ ಆಸೆಯನ್ನು ಜೀವಂತವಾಗಿ ಉಳಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಗಳನ್ನು ಗಳಿಸಿತು. ಬಾಂಗ್ಲಾದೇಶ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಕ್ಕೆ ಆರಂಭಿಕರು ಆಸರೆಯಾದರು. ನಾಯಕ ರೋಹಿತ್ ಶರ್ಮಾ ಭರ್ಜರಿ ಇನ್ನಿಂಗ್ಸ್ ಕಟ್ಟಿದರು. ಕೇವಲ ೪೩ ಬಾಲ್ ಗಳಲ್ಲಿ ಆರು ಬೌಂಡರಿ ಹಾಗೂ ಆರು ಭರ್ಜರಿ ಸಿಕ್ಸರ್ ಗಳ ನೆರವಿನಿಂದ 85 ರನ್ ಗಳಿಸಿದರು. ಮತ್ತೊಂದೆಡೆ ಶಿಖರ್ ಧವನ್ 31 ರನ್ ಗಳಿಸಿ ತಂಡಕ್ಕೆ ನೆರವಾದರು.
ಆರಂಭಿಕರು ನಿರ್ಗಮಿಸಿದ ಬಳಿಕ ಶ್ರೇಯಸ್ ಐಯರ್ ಭರ್ಜರಿಯಾಗಿ ಬ್ಯಾಟ್ ಬೀಸಿದರು.13 ಎಸೆತಗಳಲ್ಲಿ 24 ರನ್ ಗಳಿಸಿ ತಂಡವನ್ನು ಗೆಲುವಿನ ತಡ ಸೇರಿಸಿದರು.