ನಾಗ್ಪುರ, ನ 11 (DaijiworldNews/SM): ಬಾಂಗ್ಲಾ ವಿರುದ್ಧದ ಮೂರನೇ ಹಾಗೂ ಅಂತಿಮ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ-20 ಸರಣಿಯನ್ನು ತನ್ನದಾಗಿಸಿಕೊಂಡಿದೆ. ರಾಹುಲ್ ಲೋಕೇಶ್ ಹಾಗೂ ಶ್ರೆಯಸ್ ಅಯ್ಯರ್ ಅವರ ಭರ್ಜರಿ ಪ್ರದರ್ಶನದಿಂದಾಗಿ ಅಂತಿಮ ಪಂದ್ಯ ಗೆಲ್ಲುವಲ್ಲಿ ಭಾರತ ಯಶಸ್ವಿಯಾಗಿದೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಶಿಯೇಷನ್ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಯಲ್ಪಟ್ಟ ಭಾರತ ಆರಂಭದಲ್ಲೇ ಪರದಾಡಿತು. ಆರಂಭಿಕ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಹಾಗೂ ತಂಡದ ನಾಯಕ 2 ರನ್ ಗೆ ನಿರ್ಗಮಿಸಿ ನಿರಾಸೆ ಮೂಡಿಸಿದರು. ಬಳಿಕ ಶಿಖರ್ ಧವನ್ ಕೂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.
ಬಳಿಕ ತಂಡಕ್ಕೆ ನೆರವಾದವರು, ಕನ್ನಡಿಗ ಕೆ.ಎಲ್. ರಾಹುಲ್. ಕೇವಲ 35 ಎಸೆತಗಳಲ್ಲಿ ಭರ್ಜರಿ 52 ರನ್ ಗಳನ್ನು ಸಿಡಿಸಿ ಮಿಂಚಿದರು. ಇನ್ನು ಕೇವಲ 33 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ 5 ಭರ್ಜರಿ ಸಿಕ್ಸರ್ ಗಳ ನೆರವಿನಿಂದ 62 ರನ್ ಗಳಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ಟೀಂ ಇಂಡಿಯಾ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 174ರನ್ ಗಳಿಸಿತು.
ಇನ್ನು ಭಾರತ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ಬಾಂಗ್ಲಾ ತಂಡದ ಆರಂಭಿಕ ಲಿಟನ್ ದಾಸ್ ಕೇವಲ 9 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ತಂಡಕ್ಕೆ ನೆರವಾದವರು ಮಹಮ್ಮದ್ ನಯಿಮ್. ಭರ್ಜರಿಯಾಗಿ ಬ್ಯಾಟ್ ಬೀಸಿದ ನಯಿಮ್ 48 ಬಾಲ್ ಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 81 ರನ್ ಗಳನ್ನು ಸಿಡಿಸಿದರು. ಇನ್ನು ಮಹಮ್ಮದ್ ಮಿಥುನ್ 27 ರನ್ ಗಳಿಸಿದ್ದು ಬಿಟ್ಟರೆ, ಯಾವೊಬ್ಬ ಆಟಗಾರನೂ ಕೂಡ ಕನಿಷ್ಟ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಬಾಂಗ್ಲಾ ತಂಡ 144 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡು ಭಾರತಕ್ಕೆ ಶರಣಾಯಿತು.
ಭಾರತದ ಪರ ದೀಪಕ್ ಚಾಹಲ್ 6 ವಿಕೆಟ್ ಪಡೆದು ಮಿಂಚಿದರು. ಶಿವಮ್ ದುಬೆ 3 ವಿಕೆಟ್ ಪಡೆದರು.