ಮುಂಬೈ, ಅ.15 (DaijiworldNews/ AK): ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಲ್ರೌಂಡರ್, ವಿಶ್ವಕಪ್ ಹೀರೊ ಯುವರಾಜ್ ಸಿಂಗ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಅಖಾಡಕ್ಕೆ ಮರಳಿದ್ದಾರೆ. ಆದರೆ ಈ ಬಾರಿ ಅವರು ಬ್ಯಾಟ್ ಹಿಡಿದು ಮೈದಾನಕ್ಕಿಳಿಯುತ್ತಿಲ್ಲ, ಬದಲಿಗೆ ಮುಂಬರುವ ಐಪಿಎಲ್ 2027ರ ಆವೃತ್ತಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಯುವಿ ಅವರ ಮೊದಲ ಅಧಿಕೃತ ಪೂರ್ಣ ಪ್ರಮಾಣದ ಕೋಚಿಂಗ್ ಜವಾಬ್ದಾರಿಯಾಗಿದೆ. ಈ ಹಿಂದೆ ಅವರು ಶುಭ್ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರಂತಹ ಯುವ ಆಟಗಾರರಿಗೆ ವೈಯಕ್ತಿಕವಾಗಿ ಮಾರ್ಗದರ್ಶನ ನೀಡಿದ್ದಾರಾದರೂ, ಐಪಿಎಲ್ ತಂಡವೊಂದರ ಕೋಚಿಂಗ್ ಸ್ಟಾಫ್ ಸೇರುತ್ತಿರುವುದು ಇದೇ ಮೊದಲು.
ಡೆಲ್ಲಿ ಕ್ಯಾಪಿಟಲ್ಸ್ ಇತ್ತೀಚೆಗಷ್ಟೇ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ತನ್ನ ಮುಖ್ಯ ತರಬೇತುದಾರರನ್ನಾಗಿ ಘೋಷಿಸಿತ್ತು. ಇದೀಗ ಗಂಗೂಲಿ ಅವರ ನೇತೃತ್ವದ ಕೋಚಿಂಗ್ ತಂಡಕ್ಕೆ ಯುವರಾಜ್ ಸಿಂಗ್ ಸೇರ್ಪಡೆಯಾಗಿದ್ದಾರೆ.
ತಮ್ಮ ಹೊಸ ಜವಾಬ್ದಾರಿಯ ಕುರಿತು ಡೆಲ್ಲಿ ಕ್ಯಾಪಿಟಲ್ಸ್ ಸಂದರ್ಶನದಲ್ಲಿ ಮಾತನಾಡಿದ ಯುವಿ, “ದಾದಾ ನನ್ನ ಬಳಿ ಬಂದು ‘ನನ್ನ ಅಸಿಸ್ಟೆಂಟ್ ಆಗುವಿಯಾ?’ ಎಂದು ಕೇಳಿದರು. ನಾನು ಕಳೆದ 25 ವರ್ಷಗಳಿಂದಲೂ ನಿಮ್ಮ ಅಸಿಸ್ಟೆಂಟ್ ಆಗಿಯೇ ಇದ್ದೇನೆ, ಈಗಲೂ ಅದೇ ಕೆಲಸ ಮಾಡುತ್ತೇನೆ ಎಂದು ತಮಾಷೆ ಮಾಡಿದೆ. ಅದರಂತೆ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಹೊಸ ಅಧ್ಯಾಯ ಆರಂಭಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ” ಎಂದು ಸಂತಸ ಹಂಚಿಕೊಂಡಿದ್ದಾರೆ.