ಬೆಂಗಳೂರು, ಅ.16 (DaijiworldNews/AA): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಐದು ಟಿ-20 ಪಂದ್ಯಗಳ ಸರಣಿಯ ಅಂತಿಮ ಪಂದ್ಯ ಅಕ್ಟೋಬರ್ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಸಂಚಾರಿ ಪೊಲೀಸರು, ಕೆಲ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡ ತಲಾ ಎರಡು ಪಂದ್ಯಗಳಲ್ಲಿ ಗೆದ್ದು ಸಮಯಬಲ ಕಾಯ್ದುಕೊಂಡಿವೆ. ಹೀಗಾಗಿ ನಾಳೆ ನಡೆಯುವ ಪಂದ್ಯ ಉಭಯ ತಂಡಗಳಿಗೆ ನಿರ್ಣಾಯಕ ಪಂದ್ಯವಾಗಿರಲಿದೆ.
ಮುಂಜಾಗ್ರತಾ ಕ್ರಮವಾಗಿ ಸ್ಟೇಡಿಯಂ ಸುತ್ತಮುತ್ತ ಟ್ರಾಫಿಕ್ ಸಮಸ್ಯೆ ಆಗಬಾರದು ಎನ್ನುವ ದೃಷ್ಟಿಯಿಂದ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ. ಇನ್ನು ಪಾರ್ಕಿಂಗ್ ಸಹ ಸಂಪೂರ್ಣ ನಿಷೇಧಿಸಲಾಗಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಉಂಟಾಗಬಹುದಾದ ಸಂಚಾರ ದಟ್ಟಣೆ ಉಂಟಾಗಬಹುದು. ಹೀಗಾಗಿ ಸಂಚಾರ ಸುಗಮಗೊಳಿಸುವ ಸಲುವಾಗಿ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಬರುವ ಪ್ರೇಕ್ಷಕರು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ವಾಹನಗಳನ್ನು ಹಾಗೂ ಮೆಟ್ರೋ ಸೇವೆಯನ್ನು ಬಳಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.