ನವದೆಹಲಿ, ಡಿ 10 (DaijiworldNews/SM): ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರ ಅವಧಿ ಮುಂದಿನ ವರ್ಷ ಮೇ ತಿಂಗಳಲ್ಲಿ ಅಂತ್ಯಗೊಳ್ಳಲಿದೆ. ಈಗಾಗಲೇ ಒಂದು ಅವದಿ ಪೂರೈಸಿರುವ ಶಶಾಂಕ್ ಅವರದು ಇದು ಎರಡನೇ ಅವಧಿಯಾಗಿದೆ. ಈ ಹಿನ್ನೆಲೆಯಲ್ಲಿ ಮೂರನೇ ಅವಧಿಗೆ ಸ್ಪರ್ಧಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಮನೋಹರ್ ಪ್ರಸ್ತುತ ಐಸಿಸಿ ಮುಖ್ಯಸ್ಥರಾಗಿದ್ದಾರೆ. ಆಂಗ್ಲ ಪತ್ರಿಕೆಯೊಂದರ ವರದಿಯ ಪ್ರಕಾರ ಮನೋಹರ್ ಅವರು ಮೂರನೇ ಅವಧಿಗೆ ಸ್ಪರ್ಧಿಸುವುದಿಲ್ಲ ಎನ್ನಲಾಗಿದೆ. ಮೊದಲ ಬಾರಿಗೆ ಮನೋಹರ್ ಅವರು ಐಸಿಸಿಯ ಮುಖ್ಯಸ್ಥರಾಗಿದ್ದು 2016ನೇ ವರ್ಷದ ಮೇ ತಿಂಗಳಲ್ಲಿ. ಮೊದಲ ಅವಧಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದರು. ಬಳಿಕ ಅವರು ಮಾರ್ಚ್ ನಲ್ಲಿ ವೈಯಕ್ತಿಕ ಕಾರಣಗಳನ್ನು ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.
ಆದರೆ ಕಳೆದ ವರ್ಷ ಎರಡನೇ ಬಾರಿಗೆ ಅವರು ಮತ್ತೆ ಐಸಿಸಿ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಮನೋಹರ್ ಅವರ ಎರಡನೇ ಅವಧಿಯು ಮುಂದಿನ ವರ್ಷದ ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅವರು ಮತ್ತೊಂದು ಅವಧಿಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ.