ಲಂಡನ್, ಡಿ 25(Daijiworld News/MB) : ಪಾಕಿಸ್ತಾನ ಆಲ್ರೌಂಡರ್ ಮೊಹಮ್ಮದ್ ಹಫೀಜ್ ಅವರನ್ನು ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯದಲ್ಲಿ ನಡೆಯುವ ಎಲ್ಲ ಸ್ಪರ್ಧೆಗಳಿಂದ ಅಮಾನತು ಮಾಡಲಾಗಿದೆ.
ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಆಟಗಾರನು ಬೌಲಿಂಗ್ ಮಾಡುವ ಸಂದರ್ಭದಲ್ಲಿ ಆತನ ಆಫ್-ಸ್ಪಿನ್ ಬೌಲಿಂಗ್ನಲ್ಲಿ ಮೊಣಕೈ ವಿಸ್ತರಣೆಯು 15 ಡಿಗ್ರಿಗಳನ್ನು ಮೀರಿದ್ದು ಇದನ್ನು ಅಕ್ರಮ ಬೌಲಿಂಗ್ ಎಂದು ಪರಿಗಣಿಸಲಾಗಿದೆ. ಈ ಹಿನ್ನಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಆಟಗಾರ ಮೊಹಮ್ಮದ್ ಹಫೀಜ್ಗೆ ಬ್ರಿಟನ್ ಸ್ಪರ್ಧೆಗೆ ನಿಷೇಧ ಮಾಡಲಾಗಿದೆ.
ಆಗಷ್ಟ್ 30ರಂದು ಟೌನ್ಟನ್ನಲ್ಲಿ ನಡೆದಿದ್ದ ಟಿ20 ಬ್ಲಾಸ್ಟ್ ಟೂರ್ನಿಯ ಸಮರ್ಸೆಟ್ ಮತ್ತು ಮಿಡ್ಲ್ಸೆಕ್ಸ್ ನಡುವಿನ ಪಂದ್ಯದಲ್ಲಿನ ಬೌಲಿಂಗ್ ಆ್ಯಕ್ಷನ್ಗಾಗಿ ಹಫೀಸ್ ಮೇಲೆ ಆರೋಪ ಕೇಳಿಬಂದಿತ್ತು. ದಕ್ಷಿಣ ಆಫ್ರಿಕಾ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಬದಲಿಗೆ ಹಫೀಸ್ ಅವರನ್ನು ತಂಡಕ್ಕೆ ಸೇರಿಕೊಳ್ಳಲಾಗಿತ್ತು.
39 ವರ್ಷದ ಆಲ್ ರೌಂಡರ್ ಹಫೀಸ್ ಈವರೆಗೂ ಪಾಕಿಸ್ತಾನ ಪರ 105 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ 3652 ರನ್, 216 ಏಕದಿನ ಇನ್ನಿಂಗ್ಸ್ಗಳಲ್ಲಿ 6614 ರನ್ ಮತ್ತು 86 ಟಿ 20 ಇನ್ನಿಂಗ್ಸ್ಗಳಲ್ಲಿ 1908 ರನ್ ಗಳಿಸಿದ್ದಾರೆ. 77 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ 53 ವಿಕೆಟ್, 177 ಏಕದಿನ ಇನ್ನಿಂಗ್ಸ್ಗಳಲ್ಲಿ 139 ವಿಕೆಟ್ಗಳು, 67 ಟಿ20ಐ ಇನ್ನಿಂಗ್ಸ್ಗಳಲ್ಲಿ 54 ವಿಕೆಟ್ ದಾಖಲೆ ಹೊಂದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ಮಾಡಿರುವ ಹಫೀಸ್, " ಇಸಿಬಿ ಬೌಲಿಂಗ್ ರಿವ್ಯೂ ಗ್ರೂಪ್ ನನ್ನ ಬೌಲಿಂಗ್ ಕುರಿತು ನೀಡಿದ ವರದಿಯನ್ನು ನಾನು ಸ್ವಾಗತಿಸುತ್ತೇನೆ. ಕಾರ್ಯವಿಧಾನದ ಪರೀಕ್ಷಾ ನ್ಯೂನತೆಗಳನ್ನು ಗುರುತು ಮಾಡಿದರೂ ಪರಿಶೀಲನಾ ಸಮಿತಿಯು ಅವುಗಳನ್ನು ಅಂಗೀಕಾರ ಮಾಡಿದೆ. ಬೌಲಿಂಗ್ ರಿವ್ಯೂ ಗ್ರೂಪ್ ಸಂಶೋಧನೆಗಳನ್ನು ನಾನು ಒಪ್ಪುತ್ತೇನೆ ಎಂದು ಹೇಳಿದ್ದಾರೆ.