ಮುಂಬೈ,ನ.24 (DaijiworldNews/AK): ದೋಹಾದಲ್ಲಿ ನಡೆಯುತ್ತಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ 2026ರ ರೋಚಕ ಪಂದ್ಯದಲ್ಲಿ ಭಾರತ ಎ ತಂಡ ಪಾಕಿಸ್ತಾನ ಎ ವಿರುದ್ಧ 48 ರನ್ಗಳಿಂದ ಸೋಲು ಕಂಡಿದೆ.

ಈ ಪಂದ್ಯದಲ್ಲಿ ಆಟಗಾರರ ನಡುವಿನ ಮಾತಿನ ಚಕಮಕಿ, ಸ್ಲೆಡ್ಜಿಂಗ್ ಹಾಗೂ ಮೈದಾನದಲ್ಲಿನ ಜಿದ್ದಾಜಿದ್ದಿ ಅಭಿಮಾನಿಗಳ ಗಮನ ಸೆಳೆದಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಕದನ ಇಲ್ಲಿಗೇ ಮುಗಿಯುವ ಸಾಧ್ಯತೆಯಿಲ್ಲ. ಟೂರ್ನಿಯ ಫೈನಲ್ನಲ್ಲೂ ಈ ಎರಡು ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುವ ಅವಕಾಶವಿದೆ.
2026ರ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಫೈನಲ್ ಪಂದ್ಯ ನವೆಂಬರ್ 29ರಂದು ದೋಹಾದಲ್ಲಿ ನಡೆಯಲಿದೆ. ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಫೈನಲ್ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ.
ಸೆಮಿಫೈನಲ್ನಲ್ಲಿ ಪಾಕಿಸ್ತಾನ ತಂಡಕ್ಕೆ ಬಾಂಗ್ಲಾದೇಶ ಎದುರಾದರೆ, ಭಾರತಕ್ಕೆ ಶ್ರೀಲಂಕಾ ಎದುರಾಗುವ ಸಾಧ್ಯತೆಗಳಿವೆ. ಈ ಸುತ್ತಿನಲ್ಲಿ ಭಾರತ ಹಾಗೂ ಪಾಕಿಸ್ತಾನ ಗೆಲುವು ಸಾಧಿಸಿದರೆ ಫೈನಲ್ಗೆ ಅರ್ಹತೆ ಪಡೆಯಲಿವೆ.
ಭಾರತ ಎ ವಿರುದ್ಧ 48 ರನ್ಗಳ ಭರ್ಜರಿ ಗೆಲುವು ದಾಖಲಿಸಿರುವ ಪಾಕಿಸ್ತಾನ ಎ ಈಗಾಗಲೇ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಆದರೆ ಭಾರತ ಎ ತಂಡದ ಸೆಮಿಫೈನಲ್ ಪ್ರವೇಶ ಇನ್ನೂ ಖಚಿತವಾಗಿಲ್ಲ. ಫೈನಲ್ನಲ್ಲಿ ಪಾಕಿಸ್ತಾನವನ್ನು ಎದುರಿಸಬೇಕೆಂದರೆ ಮೊದಲು ಯುಎಇ ವಿರುದ್ಧದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕು.