ಮುಂಬೈ, ನ.25 (DaijiworldNews/AK): ಇಂಡಿಯನ್ ಪ್ರೀಮಿಯರ್ ಲೀಗ್ 2027ರ ಆವೃತ್ತಿಯ ಮಿನಿ ಹರಾಜಿಗೆ ವೇದಿಕೆ ಸಿದ್ಧವಾಗಿದೆ. 2026ರ ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಈ ಹರಾಜು ಪ್ರಕ್ರಿಯೆಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 1,220 ಆಟಗಾರರ ಆರಂಭಿಕ ನೋಂದಣಿ ಪಟ್ಟಿಯನ್ನು ಎಲ್ಲಾ 10 ಫ್ರಾಂಚೈಸಿಗಳಿಗೆ ಹಂಚಿಕೊಂಡಿದೆ.

ಒಟ್ಟು 1,220 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರೂ, ಎಲ್ಲಾ ತಂಡಗಳಲ್ಲಿ ಖಾಲಿ ಇರುವುದು ಕೇವಲ 66 ಸ್ಥಾನಗಳು ಮಾತ್ರ. ಇದರಲ್ಲಿ 25 ವಿದೇಶಿ ಆಟಗಾರರ ಸ್ಥಾನಗಳೂ ಸೇರಿವೆ. ಅಂದರೆ, ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದ ಗರಿಷ್ಠ 25 ಆಟಗಾರರ ಮಿತಿಯನ್ನು ಪೂರ್ಣವಾಗಿ ಭರ್ತಿ ಮಾಡಿದರೆ, ಕೇವಲ 66 ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ. ಈ ಬಾರಿಯ ಹರಾಜು ಪಟ್ಟಿಯಲ್ಲಿ 939 ಭಾರತೀಯರು ಹಾಗೂ 281 ವಿದೇಶಿ ಆಟಗಾರರು ಸ್ಥಾನ ಪಡೆದಿದ್ದಾರೆ.
ವಿದೇಶಿ ಆಟಗಾರರ ವಿಭಾಗದಲ್ಲಿ ಇಂಗ್ಲೆಂಡ್ನ ತಾರಾ ಆಲ್ರೌಂಡರ್ ಬೆನ್ ಸ್ಟೋಕ್ಸ್ , ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ನ್ಯೂಝಿಲೆಂಡ್ನ ಟ್ರೆಂಟ್ ಬೌಲ್ಟ್ ಸೇರಿದಂತೆ 28 ವಿದೇಶಿ ಆಟಗಾರರು ಗರಿಷ್ಠ 2 ಕೋಟಿ ಮೂಲ ಬೆಲೆಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಬಾಂಗ್ಲಾದೇಶದ 12 ಆಟಗಾರರು ಪಟ್ಟಿಯಲ್ಲಿದ್ದರೆ, ಮುಸ್ತಫಿಝುರ್ ರೆಹಮಾನ್ ಮತ್ತು ಶಕೀಬ್ ಅಲ್ ಹಸನ್ ಹರಾಜಿನಿಂದ ದೂರ ಉಳಿದಿದ್ದಾರೆ. ಇನ್ನು ಅಸೋಸಿಯೇಟ್ ವಿಭಾಗದಲ್ಲಿ ಜಪಾನ್ನ ಬೆಂಜಮಿನ್ ಇಟೊ ಡೇವಿಸ್ ಕೂಡ ಹರಾಜು ಪಟ್ಟಿಯಲ್ಲಿದ್ದಾರೆ.
ಹೆಸರು ನೋಂದಾಯಿಸಿಕೊಂಡಿರುವ ಎಲ್ಲಾ 1,220 ಆಟಗಾರರು ನೇರವಾಗಿ ಹರಾಜು ಕಣಕ್ಕೆ ಇಳಿಯುವುದಿಲ್ಲ. ಬದಲಾಗಿ ಅವರನ್ನು ಪರಿಶೀಲಿಸಿ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಎಲ್ಲಾ 10 ತಂಡಗಳು ತಮಗೆ ಅಗತ್ಯವಿರುವ ಆಟಗಾರರ ಆದ್ಯತಾ ಪಟ್ಟಿಯನ್ನು ಡಿಸೆಂಬರ್ 1ರ ಒಳಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸಲ್ಲಿಸಬೇಕಿದೆ.