ನ್ಯೂಜಿಲ್ಯಾಂಡ್, ಜ 31 (DaijiworldNews/SM): ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಟಿ-20 ಪಂದ್ಯವನ್ನು ಟೈ ಮೂಲಕ ಕೊನೆಗೊಳಿಸಿದ್ದ ಟೀಂ ಇಂಡಿಯಾ ಇದೀಗ ಹಳೆ ಚಾಳಿಯನ್ನೇ ನಾಲ್ಕನೇ ಪಂದ್ಯದಲ್ಲೂ ಮುಂದುವರೆಸಿ ಪಂದ್ಯವನ್ನು ಟೈಯಾಗಿಸಿದೆ. ಆದರೆ ಬಳಿಕದ ಸೂಪರ್ ಓವರ್ ನಲ್ಲಿ ರಾಹುಲ್ ಅವರ ಸೂಪರ್ ಸಿಕ್ಸರ್ ನೆರವಿನಿಂದ ಟೀಂ ಇಂಡಿಯಾ ನಾಲ್ಕನೇ ಟಿ-20 ಪಂದ್ಯವನ್ನೂ ಕೂಡ ಗೆದ್ದು ಬೀಗಿದೆ.
ವಿಲ್ಲಿಂಗ್ಟನ್ ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 165 ರನ್ ಗಳ ಸಾಧಾರಣ ಮೊತ್ತ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ನಿಗದಿತ ಓವರ್ ನಲ್ಲಿ 165 ರನ್ ಪೇರಿಸಿತು. ಆ ಮೂಲಕ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು.
ಬಳಿಕ ಉಭಯ ತಂಡಗಳಿಗೆ ಸೂಪರ್ ಓವರ್ ನೀಡಲಾಯಿತು. ಈ ಸಂದರ್ಭದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ತಂಡ 1 ವಿಕೆಟ್ ನಷ್ಟಕ್ಕೆ 12 ರನ್ ಪೇರಿಸಿತ್ತು. ಇನ್ನು 13 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಕೆಎಲ್ ರಾಹುಲ್ ಮೊದಲ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿದರು. ಎರಡನೇ ಎಸೆತದಲ್ಲಿ ಬೌಂಡರಿಗೆ ಅಟ್ಟಿದರು. ಇನ್ನು 4 ಎಸೆತಗಳಲ್ಲಿ 3 ರನ್ ಬೇಕಿತ್ತು. ಈ ವೇಳೆ ಮೂರನೇ ಎಸೆತದಲ್ಲಿ ಮತ್ತೆ ಅಬ್ಬರದ ಹೊಡೆತಕ್ಕೆ ಕೈಹಾಕಿದರಾದರೂ ಬೌಂಡರಿ ಲೈನ್ ನಲ್ಲಿದ್ದ ಫಿಲ್ಡರ್ ಗೆ ಕ್ಯಾಚ್ ನೀಡುವ ಮೂಲಕ ನಿರ್ಗಮಿಸಿದರು.
ಈ ವೇಳೆ ಟೀಂ ಇಂಡಿಯಾಕ್ಕೆ ಗೆಲ್ಲಲು 3 ಎಸೆತದಲ್ಲಿ 3 ರನ್ ಬೇಕಿತ್ತು. ಈ ವೇಳೆ ಕೊಹ್ಲಿ ನಾಲ್ಕನೇ ಎಸೆತದಲ್ಲಿ 2 ರನ್ ಪಡೆದುಕೊಂಡರು. 5ನೇ ಎಸೆತದಲ್ಲಿ ಬೌಂಡರಿ ಬಾರಿಸಿ ಗೆಲುವಿನ ದಡ ಸೇರಿಸಿದರು.