ಸಿಡ್ನಿ, ಫೆ 21 (DaijiworldNews/SM): ಟಿ-20 ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಭರ್ಜರಿ ಫಾರ್ಮ್ ನಲ್ಲಿರುವಾಗಲೇ ಇದೀಗ ಆರಂಭಗೊಂಡಿರುವ ವನಿತಾ ಟಿ-೨೦ ವಿಶ್ವಕಪ್ ನಲ್ಲಿ ತಾವು ಕೂಡ ಪ್ರಬಲರಾಗಿದ್ದೇವೆ ಎಂಬುವುದನ್ನು ವನಿತಾ ಕ್ರಿಕೆಟಿಗರು ತೋರಿಸಿಕೊಟ್ಟಿದ್ದಾರೆ.
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಮೊದಲನೇ ಪಂದ್ಯದಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಗಿರುವ ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ 17 ರನ್ ಗಳಿಂದ ಗೆದ್ದು ಬೀಗಿದೆ. ಪೂನಮ್ ಯಾದವ್ ಅವರ ಸ್ಪಿನ್ ಮೋಡಿಗೆ ಆಸಿಸ್ ತಂಡದ ವನಿತೆಯರು ರನಿ ಕಸಿಯಲು ವಿಫಲರಾದರು. ಪೂನಮ್ 19 ರನ್ ಗಳನ್ನು ನೀಡಿ 4 ವಿಕೆಟ್ ಗಳನ್ನು ಪಡೆಯುವ ಮೂಲಕ ಗೆಲುವಿನ ರುವಾರಿ ಎಣಿಸಿಕೊಂಡರು.
ಇನ್ನು ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ 132 ರನ್ ಗಳಿಸಿ ಆಸಿಸ್ ತಂಡಕ್ಕೆ ಗೆಲ್ಲಲು, 133 ರನ್ ಗಳ ಗುರಿ ನಿಗದಿಗೊಳಿಸಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಟಗಾರ್ತಿ ಅಲಿಸಾ ಹೀಲಿ ಅದ್ಭುತ ಬ್ಯಾಟಿಂಗ್ ಮೂಲಕ ನೆರವಾದರು. ಕೇವಲ 35 ಎಸೆತಗಳಲ್ಲಿ 51 ರನ್ ಚಚ್ಚಿದರು. ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಇವರನ್ನು ಪೂನಮ್ ಯಾದವ್ ಸ್ಪಿನ್ ಬಲೆಗೆ ಬೀಳಿಸಿದರು.
ಕೊನೆಯ ಓವರ್ವೆರೆಗೂ ಭಾರತದ ಸವಾಲನ್ನು ಮೆಟ್ಟಿನಿಂತ ಆ್ಯಶ್ಲೆ ಗಾರ್ಡನರ್ 34 ರನ್ ಗಳಿಸಿ ಗೆಲುವಿನ ಆಸೆ ಜೀವಂತವಾಗಿರಿಸಿದ್ದರು. ಆದರೆ, ಮತ್ತೊಂದೆಡೆ ಭಾರತೀಯ ಬೌಲರ್ ಗಳ ಮುಂದು ಎದೆಯೊಡ್ಡಿ ನಿಲ್ಲಲು ವಿಫಲರಾದರು. ಭಾರತದ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಪೂನಮ್ ಯಾದವ್ ನಾಲ್ಕು ಮತ್ತು ಶಿಖಾ ಪಾಂಡೆ ಮೂರು ವಿಕೆಟ್ ಪಡೆದು ಮಿಂಚಿದ್ದಲ್ಲದೆ, ತಂಡ ಗೆಲುವಿನ ರುವಾರಿಗಳೆನಿಸಿಕೊಂಡರು.