ದುಬೈ, ಫೆ 26 (DaijiworldNews/SM): ಕಳೆದ ಒಂದು ವರ್ಷದಲ್ಲಿ ನಿರಂತರವಾಗಿ ಏರಿಕೆ ಹಾದಿಯಲ್ಲಿದ್ದುಕೊಂಡು ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲೂ ನಂಬರ್ 1 ಪಟ್ಟ ಅಲಂಕರಿಸಿದ್ದ ಟೀಂ ಇಂಡಿಯಾ ನಾಯಕನ ಸ್ಥಾನ ಇದೀಗ ಕುಸಿತಗೊಂಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬುಧವಾರ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಪ್ರಕಟಿಸಿದೆ. ಇದರ ಪ್ರಕಾರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಆ ಮೂಲಕ ಅಗ್ರಸ್ಥಾನವನ್ನು ವಿರಾಟ್ ಕಳೆದುಕೊಂಡಿದ್ದಾರೆ.
ಕಳೆದ ಕೆಲವು ಪಂದ್ಯಗಳಲ್ಲಿ ವಿರಾಟ ನಿರೀಕ್ಷೆಯ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ವಿಫಲ ಪ್ರದರ್ಶನ ತೋರಿದ್ದರು. ಇದು ನೇರ ಪರಿಣಾಮ ಬೀರಿದೆ. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರು ಈ ಬಾರಿ ಅಗ್ರಸ್ಥಾನವನ್ನು ಅಲಂಕಿಸಿದ್ದಾರೆ. ವಿರಾಟ್ ಹಾಗೂ ಸ್ಮಿತ್ ಅವರ ಅಂಕ ಗಳಿಕೆಯಲ್ಲಿ ವ್ಯತ್ಯಾಸ ವಿರುವುದು ಕೇವಲ ಐದೇ ಅಂಕಗಳು.
911 ಅಂಕಗಳನ್ನು ಖಾತೆಯಲ್ಲಿ ಹೊಂದಿರುವ ಮೂಲಕ ಸ್ಮಿತ್ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ರ್ಯಾಂಕಿಂಗ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಅವರು 906 ಪಾಯಿಂಟ್ ಗಳನ್ನು ಹೊಂದಿದ್ದಾರೆ.
ಇತ್ತೀಚಿಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕೇವಲ ಎರಡು ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಎರಡನೇ ಇನಿಂಗ್ಸ್ ನಲ್ಲಿ 19ರನ್ ಗಳಿಸಿ ಔಟ್ ಆಗಿದ್ದರು. ಹೀಗಾಗಿ ರ್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.