ಕ್ರೈಸ್ಟ್ಚರ್ಚ್,ಫೆ 28 (DaijiworldNews/SM): ಭರ್ಜರಿ ಪ್ರದರ್ಶನದ ನಡುವೆಯೂ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕ ಮೊದಲ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಹೀನಾಯ ಸೋಲನುಭವಿಸಿರುವುದು ತಿಳಿದಿರುವ ವಿಚಾರ. ಆದರೆ, ಇದೀಗ ಎರಡನೇ ಟೆಸ್ಟ್ ಪಂದ್ಯ ಹತ್ತಿರವಾಗಿದ್ದು, ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಟೀಂ ಇಂಡಿಯಾಕ್ಕಿದೆ.
ಮೊದಲ ಪಂದ್ಯದಲ್ಲಿ 10 ವಿಕೆಟ್ಗಳ ಹೀನಾಯ ಸೋಲು ಅನುಭವಿಸಿದ್ದ ಭಾರತ ತಂಡ ಶನಿವಾರದಿಂದ ಮತ್ತೆ ನ್ಯೂಜಿಲೆಂಡ್ ವಿರುದ್ಧ ಎರಡನೇ ಹಾಗೂ ಅಂತಿಮ ಹಣಾಹಣಿಯಲ್ಲಿ ಮುಖಾಮುಖಿಯಾಗಲಿದೆ. ಈಗಾಗಲೇ 1-0ಯಿಂದ ನ್ಯೂಜಿಲ್ಯಾಂಡ್ ತಂಡ ಸರಣಿಯಲ್ಲಿ ಮೇಲುಗೈ ಸಾಧಿಸಿದೆ. ಒಂದೊಮ್ಮೆ ಎರಡನೇ ಪಂದ್ಯವನ್ನೂ ಕೂಡ ಗೆದ್ದರೆ, ಅಥವಾ ಡ್ರಾದಲ್ಲಿ ಮುಗಿಸಿದ್ದಲ್ಲಿ ಭಾರತ ವಿರುದ್ಧದ ಸರಣಿ ನ್ಯೂಜಿಲ್ಯಾಂಡ್ ತಂಡದ ಪಾಲಾಗಲಿದೆ.
ಈ ಹಿನ್ನೆಲೆಯಲ್ಲಿ ಎರಡನೇ ಪಂದ್ಯವನ್ನು ಗೆಲ್ಲುವುದು ಭಾರತಕ್ಕೆ ಅನಿವಾರ್ಯವೂ ಅಗತ್ಯವೂ ಆಗಿದೆ. ಇತ್ತೀಚಿನ ದಿನಗಳಲ್ಲಿ ವಿಶ್ವದ ಶ್ರೇಷ್ಠ ಬ್ಯಾಟಿಂಗ್ ಲೈನ್ ಹೊಂದಿರುವ ತಂಡ ಭಾರತವಾಗಿದೆ. ಆದರೆ, ನ್ಯೂಜಿಲ್ಯಾಂಡ್ ನ ಶಿಸ್ತಿನ ಮಾರಕ ದಾಳಿಗೆ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲನುಭವಿಸಿದೆ. ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್ ನಲ್ಲಿ ಅನುಭವಿಗಳಾದ ಹಲವು ಮಂದಿ ಬ್ಯಾಟ್ಸ್ ಮನ್ ಗಳು ಭಾರತ ತಂಡದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಗ್ಲೆ ಓವಲ್ ಮೈದಾನದಲ್ಲಿ ಭಾರತವೂ ಕೂಡ ಶಿಸ್ತಿನ ಪ್ರದರ್ಶನ ನೀಡುವುದು ಅನಿವಾರ್ಯವಾಗಿದೆ. ಒಂದೊಮ್ಮೆ ಈ ಪಂದ್ಯದಲ್ಲೂ ಎಡವಿದ್ದಲ್ಲಿ ವಿರಾಟ್ ಬಳಗ ಸರಣಿ ಕೈ ಚೆಲ್ಲಬೇಕಾಗುತ್ತದೆ. ಒಂದೊಮ್ಮೆ ಈ ಪಂದ್ಯ ಗೆದ್ದಲ್ಲಿ ಮಾತ್ರ ಸರಣಿಯನ್ನು ಡ್ರಾದಲ್ಲಿ ಮುಕ್ತಾಯಗೊಳಿಸಲು ಅವಕಾಶವಿದೆ.
ಇನ್ನು ಎರಡನೇ ಪಂದ್ಯಕ್ಕೆ ಇಶಾಂತ್ ಶರ್ಮಾ ಅಲಭ್ಯರಾಗಿದ್ದಾರೆ. ಆದರೆ, ಉಳಿದ ಬೌಲರ್ ಗಳು ಭಾರತದ ಪರವಾಗಿ ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಲಾಗಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಟವಾಗಿರುವ ಕಾರಣ ಎರಡನೇ ಪಂದ್ಯ ಭಾರತಕ್ಕೆ ಕಠಿಣವಾಗದು ಎಂಬುವುದು ವಿಶ್ಲೇಷಕರ ಅಭಿಪ್ರಾಯವಾಗಿದೆ.