ಕ್ರೈಸ್ಟ್ಚರ್ಚ್, ಫೆ.29 (DaijiworldNews/PY) : ಹ್ಯಾಗ್ಲೀ ಓವಲ್ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಭಾರತ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 242 ರನ್ಗೆ ಆಲೌಟ್ ಆಗಿದೆ. ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಮೊದಲ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿದ್ದು, ಕಿವೀಸ್ ಪಡೆ 179 ರನ್ಗಳ ಹಿನ್ನಡೆಯಲ್ಲಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ಕಳೆದ ಪಂದ್ಯದಂತೆ ಮತ್ತೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಪ್ರಮುಖ ಬ್ಯಾಟ್ಸ್ಮನ್ಗಳಾದ ನಾಯಕ ವಿರಾಟ್ ಕೊಹ್ಲಿ ಮತ್ತೆ ನಿರಾಸೆ ಮೂಡಿಸಿದರೆ, ಉಪ ನಾಯಕ ಅಜಿಂಕ್ಯಾ ರಹಾನೆ, ಮಯಾಂಕ್ ಅಗರ್ವಾಲ್, ರಿಷಭ್ ಪಂತ್ ನಿಂತು ಆಡುವಲ್ಲಿ ಎಡವಿದ್ದಾರೆ.
ಟೀಂ ಇಂಡಿಯಾ ಆರಂಭದಲ್ಲೇ ಮಯಾಂಕ್ ಅಗರ್ವಾಲ್(7) ವಿಕೆಟ್ ಕಳೆದುಕೊಂಡಿತು. ಪೃಥ್ವಿ ಶಾ ಅವರು ಚೇತೇಶ್ವರ್ ಪೂಜಾರ ಜೊತೆಗೂಡಿ ಅರ್ಧಶತಕದ ಜೊತೆಯಾಟ ಆಡಿದ್ದು, ಬ್ಯಾಟಿಂಗ್ ನಡೆಸಿದ ಶಾ 64 ಎಸೆತಗಳಲ್ಲಿ 54 ರನ್ ಬಾರಿಸಿ ಔಟಾಗಿದ್ದಾರೆ.
ಕ್ಯಾಪ್ಟನ್ ವಿರಾಟ್ ಕೊಹ್ಲಿ ಆಟ 3 ರನ್ಗೆ ಔಟಾದರೆ, ಉಪ ನಾಯಕ ಅಜಿಂಕ್ಯಾ ರಹಾನೆ 7 ರನ್ಗೆ ಔಟಾದರು. ಪೂಜಾರ ಕ್ರೀಸ್ ಕಚ್ಚಿ ಆಡಿದರು. ಹನುಮಾ ವಿಹಾರಿ ಇವರಿಗೆ ಉತ್ತಮ ಸಾಥ್ ನೀಡಿದ್ದು, 5ನೇ ವಿಕೆಟ್ಗೆ ಪೂಜಾರ-ವಿಹಾರ 81 ರನ್ ಕಲೆ ಹಾಕಿದರು.
ನಂತರ ಅರ್ಧಶತಕ ಸಿಡಿಸಿ ಇಬ್ಬರೂ ನಿರ್ಗಮಿಸಿದ್ದು ತಂಡಕ್ಕೆ ಆಘಾತ ಉಂಟುಮಾಡಿತು. ವಿಹಾರಿ 70 ಎಸೆತಗಳಲ್ಲಿ 55 ರನ್ಗೆ ಹಾಗೂ ಪೂಜಾರ 140 ಎಸೆತಗಳಲ್ಲಿ 54 ರನ್ಗೆ ಇನ್ನಿಂಗ್ಸ್ ಅಂತ್ಯಗೊಳಿಸಿದರು. ರಿಷಭ್ ಪಂತ್ ಕೂಡ 12 ರನ್ಗೆ ಔಟಾದರು. ಉಮೇಶ್ ಯಾದವ್ ಸೊನ್ನೆ ಸುತ್ತಿದರು.
ರವೀಂದ್ರ ಜಡೇಜಾ 9 ರನ್ಗೆ ಹಾಗೂ ಮೊಹಮ್ಮದ್ ಶಮಿ 16 ರನ್ಗೆ ಔಟ್ ಆಗುವ ಮೂಲಕ ಭಾರತ 63 ಓವರ್ನಲ್ಲಿ 242 ರನ್ಗೆ ಸರ್ವಪತನ ಕಂಡಿತು.
ನ್ಯೂಜಿಲೆಂಡ್ ಪರ ಕೈಲ್ ಜೆಮಿಸನ್ 5 ವಿಕೆಟ್, ಟಿಮ್ ಸೌಥೀ 2 ಹಾಗೂ ಟ್ರೆಂಟ್ ಬೌಲ್ಟ್ ತಲಾ ಹಾಗೂ ನೈಲ್ ಬಾಗ್ನೆರ್ 1 ವಿಕೆಟ್ ಪಡೆದರು.
ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆದುಕೊಂಡಿತು. ವಿಕೆಟ್ಗಾಗಿ ಕೊಹ್ಲಿ ವಿವಿಧ ತಂತ್ರ ಪ್ರಯೋಗಿಸಿದರಾದರೂ ಯಾವುದೂ ಯಶಸ್ವಿಯಾಗಲಿಲ್ಲ. ಮೊದಲ ದಿನದಾಟದ ಅಂತ್ಯಕ್ಕೆ ಕಿವೀಸ್ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿದ್ದು, ಟಾಮ್ ಲಾಥಮ್ 27 ಹಾಗೂ ಟಾಮ್ ಬ್ಲಂಡೆಲ್ 29 ರನ್ ಗಳಿಸಿ ಭಾನುವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.