ಮಲೇಶ್ಯಾ, ಮಾ 03 (DaijiworldNews/SM): ವಿಶ್ವದೆಲ್ಲೆಡೆ ಮಾರಕ ಕೊರೊನಾ ಮಹಾಮಾರಿಯ ತೀವ್ರತೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ವಿವಿಧ ರೀತಿಯಲ್ಲಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಕಾರಣದಿಂದಾಗಿ ಮಲೇಶ್ಯಾದಲ್ಲಿ ನಡೆಯ ಬೇಕಿದ್ದ ಅಝ್ಲಾನ್ ಶಾ ಕಪ್ ಹಾಕಿ ಟೂರ್ನಮೆಂಟ್ ಮುಂದೂಡಲಾಗಿದೆ. ಎಪ್ರಿಲ್ ನಲ್ಲಿ ನಡೆಯ ಬೇಕಿದ್ದ ಟೂರ್ನಮೆಂಟ್ ಸೆಪ್ಟೆಂಬರ್ ತಿಂಗಳಿಗೆ ಮುಂದೂಡಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಯೋಜಕರು, ಮಲೇಶ್ಯಾದಲ್ಲಿ ಟೂರ್ನಮೆಂಟ್ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಮುಂದಿನ ತಿಂಗಳ 11ರಿಂದ 18ರ ತನಕ ಟೂರ್ನಮೆಂಟ್ ನಡೆಯಬೇಕಿತ್ತು. ಆದರೆ, ವಿಶ್ವವ್ಯಾಪಿಯಾಗುತ್ತಿರುವ ಮಾರಕ ಕೊರೊನಾ ಹಿನ್ನೆಲೆಯಲ್ಲಿ ಇದನ್ನು ಮುಂದೂಡಲಾಗಿದೆ. ಎಪ್ರಿಲ್ ತಿಂಗಳಲ್ಲಿ ನಡೆಸುವ ಬದಲು, ಸೆಪ್ಟೆಂಬರ್ ತಿಂಗಳ 24ರಿಂದ ಅಕ್ಟೋಬರ್ ತಿಂಗಳ 3ರ ತನಕ ನಡೆಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಈ ಪಂದ್ಯಾಕೂಟದಲ್ಲಿ ಭಾರತ ನಿರಂತರವಾಗಿ ಭಾಗವಹಿಸುತ್ತಿದ್ದು, ಈ ಬಾರಿಯ ಟೂರ್ನಮೆಂಟ್ ನಲ್ಲಿ ಭಾರತ ಭಾಗಿಯಾಗುತ್ತಿಲ್ಲ. ಅಝ್ಲಾನ್ ಶಾ ಕಪ್ ಪಂಡ್ಯಾಕೂಟ ಪುರುಷರ ವಿಭಾಗದ ಹಾಕಿ ಕ್ರೀಡಾಕೂಟವಾಗಿದೆ. ಈ ಬಾರಿ ಆಸ್ಟ್ರೇಲಿಯಾ, ಕೆನಡಾ, ಜಪಾನ್, ಮಲೇಶ್ಯಾ, ಪಾಕಿಸ್ತಾನ ಹಾಗೂ ದಕ್ಷಿಣ ಕೊರೆಯಾ ಕೂಟದಲ್ಲಿ ಭಾಗವಹಿಸಲಿವೆ.