ನವದೆಹಲಿ, ಮಾ 03(DaijiworldNews/SM): ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕಿರಿಯ ವಯಸ್ಸಿನ್ನಲ್ಲೇ ಮಿಂಚುತ್ತಿರುವ ಭಾರತ ವನಿತಾ ತಂಡದ 16ರ ಹರೆಯದ ಶಫಾಲಿ ವರ್ಮಾ ಅಂತರಾಷ್ಟ್ರಿಯ ಮಹಿಳಾ ಟಿ-20 ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ವನಿತೆಯರ ಟಿ-20 ವಿಶ್ವಕಪ್ ನಲ್ಲಿ ಶಫಾಲಿ ವರ್ಮಾ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅತ್ಯುತ್ತಮ ಹಾಗೂ ಸ್ಪೋಟಕ ಬ್ಯಾಟಿಂಗ್ ಮೂಲಕ ಭಾರತೀಯರ ಮನೆ ಮಾತಾಗಿದ್ದಾರೆ. ಭಾರತೀಯ ವನಿತಾ ತಂಡ ಸತತ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡು ಸೆಮಿಫೈನಲ್ ಗೆ ಎಂಟ್ರಿಕೊಡಲು ಶಫಾಲಿ ಬ್ಯಾಟಿಂಗ್ ವಿಭಾಗದಲ್ಲಿ ಪ್ರಮುಖ ಕಾರಣರಾಗಿದ್ದಾರೆ.
ಈ ಪ್ರದರ್ಶನದ ಮೂಲಕ ಐಸಿಸಿ ವಿಶ್ವಕಪ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನ ಅಲಂಕರಿಸಿದ ಎರಡನೇ ಭಾರತೀಯ ಮಹಿಳಾ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಶಫಾಲಿ ಪಾತ್ರರಾಗಿದ್ದಾರೆ. ಈ ಹಿಂದೆ, ಮಿಥಾಲಿರಾಜ್ ಅಗ್ರಸ್ಥಾನ ಅಲಂಕರಿಸಿದ್ದರು.
ಇನ್ನು ಈ ಬಾರಿಯ ವಿಶ್ವಕಪ್ ನಲ್ಲಿ ನಡೆದ ಕಳೆದ ನಾಲ್ಕು ಪಂದ್ಯಗಳಲ್ಲಿ ಟೀಂ ಇಂಡಿಯಾದ ಯಂಗ್ ಬ್ಯಾಟಿಂಗ್ ಸ್ಟಾರ್ ಶಿಫಾಲಿ 161 ರನ್ ಗಳನ್ನು ಸಿಡಿಸಿದ್ದಾರೆ. ಇದು ಅಗ್ರಸ್ಥಾನ ಅಲಂಕರಿಸಲು ಅವರಿಗೆ ವರದಾನವಾಗಿದೆ. ಇನ್ನು ಮತ್ತೊಬ್ಬ ಭಾರತೀಯ ಆಟಗಾರ್ತಿ ಸ್ಮ್ರುತಿ ಮಂದಣ್ಣ ಎರಡಂಕ ಕುಸಿದಿದ್ದು ಆರನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ.