ನವದೆಹಲಿ, ಮಾ 05(DaijiworldNews/SM): ಭಾರತೀಯ ವನಿತಾ ತಂಡದ ಅದೃಷ್ಟ ಎಂಬಂತೆ ಸೆಮಿಫೈನಲ್ ಕಾದಟವಿಲ್ಲದೆ ಫೈನಲ್ ಗೆ ಎಂಟ್ರಿ ಪಡೆದುಕೊಂಡಿದೆ. ಇದು ಭಾರತೀಯ ವನಿತೆಯರ ಪಾಲಿಗೆ ಚೊಚ್ಚಲ ಫೈನಲ್ ಕೂಡ ಹೌದು. ಇದೀಗ ಫೈನಲ್ ಪ್ರವೇಶ ಪಡೆದಿರುವ ಭಾರತೀಯ ತಂಡಕ್ಕೆ ಹಾರೈಗೆಗಳ ಮಹಾಪೂರವೇ ಬರುತ್ತಿದೆ.
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಆರಂಭಗೊಂಡ ದಿನದಿಂದ ಇಂದಿನ ತನಕ ಭಾರತೀಯ ವನಿತೆಯರು ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಪ್ರಚಂಡ ಪ್ರದರ್ಶನ ನೀಡುತ್ತಿದ್ದಾರೆ. ಇದೇ ಕಾರಣದಿಂದ ಟೀಂ ಇಂಡಿಯಾ ಇದೀಗ ಸೆಮಿಫೈನಲ್ ಆಡದೆ ಫೈನಲ್ ಎಂಟ್ರಿ ಪಡೆದುಕೊಂಡಿದೆ. ಕೂಟದಲ್ಲಿ ಆಡಿರುವ ಎಲ್ಲಾ ನಾಲ್ಕು ಪಂದ್ಯಗಳಲ್ಲೂ ಜಯ ಗಳಿಸಿರುವ ತಂಡ ಎಂಬ ಹೆಗ್ಗಳಿಕೆಯನ್ನು ಕೂಡ ಹೊಂದಿದೆ. ಇದೀಗ ತಂಡಕ್ಕೆ ಉಳಿದಿರುವುದು ಚೊಚ್ಚಲ ವಿಶ್ವಕಪ್ ಗೆಲ್ಲುವುದು. ಯುವ ಆಟಗಾರರನ್ನೊಳಗೊಂಡಿರುವ ತಂಡದಲ್ಲಿ ಉತ್ಸಾಹ ಹೆಚ್ಚಾಗಿ ಗೋಚರಿಸುತ್ತಿದೆ.
ಗುರುವಾರದಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೊಲದ ಸೆಮಿಫೈನಲ್ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆಯಬೇಕಿತ್ತು. ಆದರೆ ಈ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ್ದ. ಪರಿಣಾಮವಾಗಿ ಪಂದ್ಯವನ್ನು ರದ್ದು ಪಡಿಸಲಾಗಿದ್ದು ಟೂರ್ನಿಯಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದು ಟೀಂ ಇಂಡಿಯಾ ಫೈನಲ್ ಪ್ರವೇಶಿಸಿದೆ.
ಸೆಮಿಫೈನಲ್ ಪಂದ್ಯಕ್ಕೆ ನಿರ್ಧಿಷ್ಟ ಮೀಸಲು ದಿನವಿರುವುದಿಲ್ಲ. ಹೀಗಾಗಿ ಟೂರ್ನಿಯಲ್ಲಿ ಅತೀ ಹೆಚ್ಚು ಪಂದ್ಯ ಗೆದ್ದಿರುವ ಭಾರತ ತಂಡ ನೇರವಾಗಿ ಫೈನಲ್ ಪ್ರವೇಶಿಸಿದೆ.
ಇನ್ನು ಮೊಟ್ಟ ಮೊದಲ ಬಾರಿ ಭಾರತ ಮಹಿಳಾ ತಂಡ ಟಿ20 ವಿಶ್ವಕಪ್ ಫೈನಲ್ ಪ್ರವೇಶ ಮಾಡಿರುವುದಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಹಿರಿಯ ಆಟಗಾರ್ತಿ ಮಿಥಾಲಿ ರಾಜ್, ಹಿರಿಯ ಕ್ರಿಕೆಟ್ ಆಟಗಾರ್ತಿ ಜೂಲನ್ ಗೋಸ್ವಾಲಿ ಅಭಿನಂದನೆ ಸಲ್ಲಿಸಿದ್ದಾರೆ.