Sports
17 ವರ್ಷಗಳ ಬಳಿಕ ಐಸಿಸಿ ವಿಶ್ವಕಪ್ ಪೈನಲ್ ಕದನದಲ್ಲಿ ಭಾರತ-ಆಸ್ಟ್ರೇಲಿಯಾ
- Sat, Mar 07 2020 05:58:52 PM
-
ಮೆಲ್ಬೋರ್ನ್, ಮಾ.07 (DaijiworldNews/PY) : 2003ನೇ ಸಾಲಿನ ಐಸಿಸಿ ಪುರುಷರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದದ ಪಂದ್ಯಾಟದಲ್ಲಿ ಸೋಲನ್ನು ಕಂಡ ಟೀಮ್ ಇಂಡಿಯಾದ ವಿಶ್ವಕಪ್ ಕನಸು ಭಗ್ನಗೊಂಡಿತ್ತು. ಇದೀಗ 17 ವರ್ಷಗಳ ನಂತರ ಐಸಿಸಿ ವಿಶ್ವಕಪ್ನಲ್ಲಿ ಮತ್ತದೇ ಆಸ್ಟ್ರೇಲಿಯಾ ಸವಾಲನ್ನು ಭಾರತ ಎದುರಿಸಲು ಸಿದ್ದವಾಗಿದೆ. ಐಸಿಸಿ ಮಹಿಳೆಯರ ವಿಶ್ವಕಪ್ನಲ್ಲಿ ಇದುವರೆಗೂ ಭಾರತ ಪ್ರಶಸ್ತಿಯನ್ನು ಗೆದ್ದಿಲ್ಲ. ಪ್ರಸ್ತುತ ಫೈನಲ್ ಪ್ರವೇಶಿಸಿರುವುದೇ ಇದುವರೆಗಿನ ಶ್ರೇಷ್ಠ ಸಾಧನೆಯಾಗಿರುವ ಹಿನ್ನೆಲಯಲ್ಲಿ ಈ ಬಾರಿ ಐಸಿಸಿ ಮಹಿಳೆಯರ ತಂಡ ಇತಿಹಾಸ ಸೃಷ್ಠಿಸಬಹುದೇ ಎಂಬುದನ್ನು ನೋಡಬೇಕಾಗಿದೆ.
ಭಾರತವು ಏಳು ದಿನಗಳ ಸುದೀರ್ಘ ವಿಶ್ರಾಂತಿಯ ನಂತರ ಫೈನಲ್ ಕದನಕ್ಕೆ ಸಿದ್ದವಾಗುತ್ತಿದೆ. ಹಾಗಾಗೀ ಈ ಏಳು ದಿನಗಳ ವಿಶ್ರಾಂತಿ ಫೈನಲ್ ಪಂದ್ಯಾಟಕ್ಕೆ ಅಡ್ಡ ಪರಿಣಾಮವಾಗಬಹುದೇ ಎಂಬುದು ಆತಂಕವಾಗಿದೆ. ಫೆ.29ರಂದು ಭಾರತ ಕೊನೆಯದಾಗಿ ಎ ಗುಂಪಿನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ಆಡಿತ್ತು. ಅಲ್ಲದೇ ಏಳು ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತ್ತು. ಇದಾದ ಬಳಿಕ ಮಾ. 5 ಗುರುವಾರದಂದು ಇಂಗ್ಲೆಂಡ್ ವಿರುದ್ದದ ಸೆಮಿ ಪಂದ್ಯಾಟವು ಮಳೆಯಿಂದಾಗಿ ರದ್ದಾಗಿತ್ತು. ಆದರೂ ಭಾರತ ಅಧಿಕ ಅಂಕ ಪಡೆದ ಆಧಾರದ ಮೇಲೆ ಫೈನಲ್ಗೆ ಕಾಲಿಟ್ಟಿದೆ.
ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ಇದೇ ಪ್ರಥಮ ಬಾರಿ ಫೈನಲ್ ಪ್ರವೇಶಿಸಿ ಸಾಧನೆ ಮಾಡಿದೆ. 1983ರಲ್ಲಿ ಮಾಜಿ ನಾಯಕ ಕಪಿಲ್ ದೇವ್ ನೇತೃತ್ವದಲ್ಲಿ ಚೊಚ್ಚಲ ಪುರುಷರ ವಿಶ್ವಕಪ್ ಗೆದ್ದ ಸಂದರ್ಭ ಭಾರತೀಯ ಕ್ರಿಕೆಟ್ ಇತಿಹಾಸ ಸೃಷ್ಠಿಮಾಡಿತ್ತು. ಇದೇ ರೀತಿ ಈಗ ಹರ್ಮನ್ಪ್ರೀತ್ ಕೌರ್ ಪಡೆಯು ಇತಿಹಾಸ ಸೃಷ್ಠಿಸುವ ತವಕದಲ್ಲಿದ್ದಾರೆ. ಭಾರತ ಮಹಿಳಾ ತಂಡ ಏಕದಿನ ವಿಶ್ವಕಪ್ಗಳಲ್ಲೂ ಇದುವರೆಗೆ ವಿಶ್ವಕಪ್ ಗೆದ್ದಿಲ್ಲ. ಆದ್ದರಿಂದ ಐಸಿಸಿ ಟೂರ್ನಿಯಲ್ಲಿ ಮಹಿಳಾ ತಂಡದ ಪಾಲಿಗೆ ಚೊಚ್ಚಲ ವಿಶ್ವಕಪ್ ಸಾಧನೆಯಾಗಲಿದೆ. 2005 ಹಾಗೂ 2017ನೇ ಇಸವಿಗಳಲ್ಲಿ ಮಹಿಳಾ ಏಕದಿನ ವಿಶ್ವಕಪ್ಗಳಲ್ಲಿ ಭಾರತ ರನ್ನರ್ ಅಪ್ ಪ್ರಶಸ್ತಿ ಪಡೆದಿತ್ತು.
ಮಾ.8 ಭಾನುವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯಾಟದಲ್ಲಿ ಎಲ್ಲಾ ವಿಭಾಗದಲ್ಲೂ ಶ್ರೇಷ್ಠ ಪ್ರದರ್ಶನ ನೀಡಿದರೆ ಮಾತ್ರವೇ ಭಾರತಕ್ಕೆ ಜಯ ಸಿಗಲಿದೆ. ಈಗಾಗಲೇ ನಾಲ್ಕು ಬಾರಿ ಪ್ರಶಸ್ತಿಯನ್ನು ತನ್ನತ್ತ ಬಾಚಿಕೊಂಡಿರುವ ಆಸ್ಟ್ರೇಲಿಯಾ ಐದನೇ ಪ್ರಶಸ್ತಿಯನ್ನು ಬಾಚಿಕೊಳ್ಳುವ ತವಕದಲ್ಲಿದೆ. ಒಟ್ಟಾರೆಯಾಗಿ ಏಳು ಟಿ20 ವಿಶ್ವಕಪ್ ಆವೃತ್ತಿಗಳ ಪೈಕಿ ಆರನೇ ಬಾರಿಗೆ ಫೈನಲ್ ಸಾಧನೆ ಮಾಡಿದೆ. ಆಸೀಸ್ ನಾಯಕಿ ಮೆಗ್ ಲ್ಯಾನಿಂಗ್, ಆರಂಭಿಕ ಆಟಗಾರ್ತಿ ಅಲಿಸಾ ಹೀಲಿ, ಬೆತ್ ಮೂನಿ, ಸ್ಟಾರ್ ಬೌಲರ್ ಮೆಗಾನ್ ಶಟ್ ಹೀಗೆ ಮ್ಯಾಚ್ ವಿನ್ನರ್ಗಳ ಪಟ್ಟಿ ಸಿದ್ದವಾಗಿದೆ. ಪಂದ್ಯಾಟದ ಎಲ್ಲಾ ವಿಭಾಗದಲ್ಲೂ ಅದರಲ್ಲಿಯೂ ನಾಕೌಟ್ ಹಂತದಲ್ಲೂ ಗೆಲ್ಲುವ ಹವ್ಯಾಸ ಮಾಡಿಕೊಂಡಿರುವ ಆಸೀಸ್ ಭಾರತದ ಪಾಲಿಗೆ ಅಪಾಯವನ್ನು ನೀಡಬಲ್ಲರು. ಹಿಂದಿನ ಟೂರ್ನಿಗೆ ಹೋಲಿಸಿದರೆ ಆಸೀಸ್ನ ಫೈನಲ್ ಹಾದಿ ಅಷ್ಟೊಂದು ಸರಾಗವಾಗಿಲ್ಲ.
ಭಾರತ ತಂಡದ ಪರ 16ರ ಹರೆಯದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ, ಮತ್ತೊಮ್ಮೆ ಬ್ಯಾಂಟಿಂಗ್ನಲ್ಲಿ ಲಯ ಕಂಡುಕೊಳ್ಳಬೇಕಾಗಿದೆ. ಶಫಾಲಿ ಶ್ರೀಲಂಕಾ ವಿರುದ್ದ ಒಟ್ಟು 161 ರನ್ ಕಲೆ ಹಾಕಿದ್ದು, 47ರನ್ ಸೇರಿದಂತೆ ನಾಲ್ಕು ಪಂದ್ಯಾಟಗಳಲ್ಲಿ 161ರ ಸ್ಟ್ರೈಕ್ರೇಟ್ ಕಾಯ್ದುಕೊಂಡಿದ್ದಾರೆ. ತಮ್ಮ ಸಾಧನೆಗೆ ಕೈಗನ್ನಡಿಯೆಂಬಂತೆ ಆಡಿದ ಶಫಾಲಿ 18 ಟಿ20 ಪಂದ್ಯಗಳಲ್ಲೇ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಶಫಾಲಿ ಭಯರಹಿತ ಆಕ್ರಮಣಕಾರಿ ಎಂದೇ ಹೆಸರುಗಳಿಸಿದ್ದು, ಮತ್ತೊಮ್ಮೆ ಇವರ ಬ್ಯಾಂಟಿಂಗ್ ಸಿಡಿಯಬೇಕಿದೆ.
ಟೂರ್ನಿ ಪ್ರಾರಂಭಕ್ಕೂ ಮುನ್ನ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧಾನಾ ಮೇಲೆ ಅತೀ ಹೆಚ್ಚು ವಿಶ್ವಾಸವತ್ತು. ಆದರೆ, ಲೀಗ್ ಹಂತದಲ್ಲಿ ಇವರಿಬ್ಬರ ವೈಫಲ್ಯದ ಹೊರತಾಗಿಯೂ ಭಾರತ ಫೈನಲ್ನತ್ತ ಲಗ್ಗೆ ಹಾಕಿದೆ. ಈಗ ಹರ್ಮನ್ ಹಾಗೂ ಸ್ಮೃತಿ ಅತೀ ಒತ್ತಡದ ಪರಿಸ್ಥಿಯನ್ನು ನಿಭಾಯಿಸಿ ತಂಡವನ್ನು ಮುನ್ನಡೆಸಬೇಕಾಗಿದೆ. ಈ ಮುಖಾಂತರ ಸಹ ಆಟಗಾರ್ತಿಯರಿಗೆ ಮಾದರಿಯಾಗಬೇಕಿದೆ. ಆಗಲೇ ಟಿ20 ವಿಶ್ವಕಪ್ನಲ್ಲಿ ಫೈನಲ್ ಸಾಧನೆ ಮಾಡಿದ ಭಾರತದ ಮೊದಲ ಹಾಗೂ ಏಕಮಾತ್ರ ನಾಯಕಿ ಎಂಬ ಗೌರವಕ್ಕೆ ಪಾತ್ರರಾಗುವ ಹರ್ಮನ್ಪ್ರೀತ್, ತಮ್ಮ ಹುಟ್ಟುಹಬ್ಬದಂದು ಮಗದೊಂದು ಹೆಜ್ಜೆಯನ್ನಿಟ್ಟು ಭಾರತಕ್ಕೆ ಚೊಚ್ಚಲ ಮಹಿಳಾ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕಿ ಎಂಬ ಬಿರುದು ಪಡೆಯಲಿದ್ದಾರೆ. ಇ
ಎಲ್ಲಾ ಪಂದ್ಯಗಳಲ್ಲೂ ಭಾರತೀಯ ಬ್ಯಾಟ್ಸ್ವುಮೆನ್ಗಳು ವೈಫಲ್ಯ ಅನುಭವಿಸಿದರೂ ಪಂದ್ಯ ಗೆಲ್ಲಿಸಿಕೊಡುವಲ್ಲಿ ಬೌಲರ್ಗಳು ಯಶಸ್ವಿಯಾಗಿದ್ದಾರೆ. ಉದ್ಘಾಟನಾ ಪಂದ್ಯದಲ್ಲೇ ನಾಲ್ಕು ವಿಕೆಟ್ ಕಬಳಿಸಿ ಪೂನಂ ಪಾಂಡೆ ಪಂದ್ಯದ ಚಿತ್ರಣವನ್ನೇ ಬದಲಾಯಸಿದರು. ನಾಲ್ಕು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ ಕಬಳಿಸಿರುವ ಪೂನಂ ವಿಕೆಟ್ ಬೇಟೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಪೂನಂ ಪಾಂಡೆಗೆ ಉತ್ತಮ ಸಾಥ್ ನೀಡುತ್ತಿರುವ ಬಲಗೈ ವೇಗದ ಬೌಲರ್ ಶಿಖಾ ಪಾಂಡೆ ಏಳು ವಿಕೆಟ್ಗಳನ್ನು ಪಡೆದಿದ್ದಾರೆ. ನಾಲ್ವರು ಸ್ಪಿನ್ನರ್ಗಳು ಭಾರತೀಯ ತಂಡದ ಬಲವಾಗಿದ್ದಾರೆ. ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್, ರಾಧಾ ಯಾದವ್ ಹಾಗೂ ದೀಪ್ತಿ ಶರ್ಮಾ ಕೂಡಾ ಉತ್ತಮ ಲಯದಲ್ಲಿದ್ದಾರೆ. ಈ ಎಲ್ಲ ಬೌಲರ್ಗಳು ಮಗದೊಮ್ಮೆ ಕ್ಲಿಕ್ ಆದರೆ ಕನಿಷ್ಠ ಮೊತ್ತವನ್ನು ಡಿಫೆಂಡ್ ಮಾಡುವ ತಾಕತ್ತು ಭಾರತಕ್ಕಿದೆ. ಅಷ್ಟೇ ಅಲ್ಲದೇ ಫೀಲ್ಡಿಂಗ್ನಲ್ಲೂ ಶಕ್ತಿಮೀರಿ ಪ್ರಯತ್ನ ಮಾಡಬೇಕಿದೆ. ಇದರಿಂದಾಗಿ ಪೂಜಾ ವಸ್ತ್ರಾಕರ್, ಹರ್ಲೀನ್ ಡಿಯೋಲ್, ಆರುಂಧತಿ ರೆಡ್ಡಿ ಹಾಗೂ ರಿಚಾ ಘೋಷ್ಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆಯಾಗಿದೆ. ಒಟ್ಟಾರೆಯಾಗಿ 17 ವರ್ಷಗಳ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ಐಸಿಸಿ ವಿಶ್ವಕಪ್ ಫೈನಲ್ ಕದನವನ್ನು ಕಾದು ನೋಡಬೇಕಿದೆ.