ಮೆಲ್ಬರ್ನ್, ಮಾ.08 (DaijiworldNews/PY) : ಮಹಿಳಾ ವಿಶ್ವಕಪ್ ಟಿ20 ಆಸ್ಟ್ರೇಲಿಯಾ ವಿರುದ್ದದ ಫೈನಲ್ ಕದನದಲ್ಲಿ ಭಾರತೀಯ ವನಿತೆಯರು 85 ರನ್ಗಳ ಸೋಲನ್ನು ಅನುಭವಿಸಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿತ್ತು.
ಆಸ್ಟ್ರೇಲಿಯಾ ಆರಂಭಿಕ ಆಟಗಾರ್ತಿಯಾರದ ಅಲೀಸಾ ಹೀಲಿ ಹಾಗೂ ಬೆಥ್ ಮೂನಿ ಶತಕದ ಜೊತೆಯಾಟವಾಡಿ 4 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತ್ತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಹೀಲಿ 30 ಎಸೆತಗಳಲ್ಲಿ ಅರ್ಧಶತಕ ಹೊಡೆದರು. ಹೀಲಿ 75 ರನ್ (39 ಎಸೆತ, 7 ಬೌಂಡರಿ, 5 ಸಿಕ್ಸರ್) ಹೊಡೆದು ಔಟಾದರೆ ನಾಯಕಿ ಮೆಗ್ ಲ್ಯಾನಿಂಗ್ 16 ರನ್ ಗಳಿಸಿದಾಗ ದೀಪ್ತಿ ಶರ್ಮಾ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ಔಟಾಗಿದ್ದರು.
ಬಳಿಕ ಬಂದ ಆಶ್ಲೆ ಗಾರ್ಡ್ನರ್ 2 ರನ್, ರೇಚಲ್ ಹೇನ್ಸ್ 4 ರನ್ ಕಲೆಹಾಕಿ ಔಟಾಗಿದ್ದರು. ಬೆಥ್ ಮೂನಿ ಔಟಾಗದೇ 78 ರನ್ (54 ಎಸೆತ, 10 ಬೌಂಡರಿ) ಹೊಡೆದು ರನ್ ಹೆಚ್ಚಿಸಿದರು. ಒಂದು ಹಂತದಲ್ಲಿ 16 ಓವರ್ಗಳಲ್ಲಿ 154 ರನ್ಗಳಿಗೆ 1 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ 22 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು.
ಇಲ್ಲಿವರೆಗಿನ ಪಂದ್ಯಾಟಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಮೊದಲ ಓವರ್ನಲ್ಲಿ ಔಟಾಗಿ ಪೆವಿಲಿಯನ್ನತ್ತ ಸಾಗಿದರು. ಇದರ ಜೊತೆಗೆ ಸ್ಮೃತಿ ಮಂದಾನಾ, ಜೆಮಿಮಾ ರಾಡ್ರಿಗಸ್, ಹರ್ಮನ್ಪ್ರೀತ್ ಕೌರ್ ವಿಕೆಟ್ ಕಳೆದುಕೊಂಡರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ತಾನಿಯಾ ಭಾಟಿಯಾ ಗಾಯಗೊಂಡ ಕಾರಣ ಆಟದಿಂದ ಹೊರ ಹೋಗಬೇಕಾಯಿತು.
ಭಾರತ ತಂಡ ನಾಲ್ಕು ವಿಕೆಟ್ ಕಳೆದುಕೊಂಡ ಬಳಿಕ ದೀಪ್ತಿ ಶರ್ಮಾ ಮತ್ತು ವೇದಾ ಕೃಷ್ಣಮೂರ್ತಿ ಸ್ವಲ್ಪ ಹೊತ್ತು ಕ್ರೀಸ್ನಲ್ಲಿದ್ದರೂ 12ನೇ ಓವರ್ನಲ್ಲಿ ವೇದಾ ವಿಕೆಟ್ ಕಳೆದುಕೊಂಡರು ಈ ಮೂಲಕ ಭಾರತದ ವನಿತಾ ತಂಡ ಮತ್ತಷ್ಟು ಒತ್ತಡಕ್ಕೆ ಸಿಲುಕಿಕೊಂಡಿತ್ತು. ವೇದಾ-19, ದೀಪ್ತಿ ಶರ್ಮಾ-33, ರಿಚಾ 18 ರನ್ ಗಳಿಸಿ ಭಾರತದ ರನ್ ಏರಿಕೆಗೆ ನೆರವಾದರು. ಆದರೆ, ಇನ್ನುಳಿದ ಆಟಗಾರ್ತಿಯರು ರನ್ ದಾಖಲಿಸಿದರೂ ಹೆಚ್ಚಿನ ರನ್ ಕಲೆ ಹಾಕಲು ಸಾಧ್ಯವಾಗಲಿಲ್ಲ.
ಆಸ್ಟ್ರೇಲಿಯಾ ತಂಡದ ಬೌಲಿಂಗ್ ಮುಂದೆ ತತ್ತರಿಸಿದ ಭಾರತ ತಂಡ 19.1 ನೇ ಓವರ್ನಲ್ಲಿ 99 ರನ್ ದಾಖಲಿಸಿ ತನ್ನ ಎಲ್ಲ ವಿಕೆಟ್ ಕಳೆದುಕೊಂಡಿತು.