ಮುಂಬೈ, ಮಾ 13 (DaijiworldNews/SM): ಕೊರೊನಾ ವೈರಸ್ ಭೀತಿ ದೇಶದೆಲ್ಲೆಡೆ ಕಾಡುತ್ತಿದೆ. ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್ ಹಾಕುತ್ತಿರುವ ಕೊರೊನಾ ಐಪಿಎಲ್ ಟೂರ್ನಿಯ ಮೇಲೆ ಕರಿಛಾಯೆಯನ್ನು ಬೀರಿದೆ. ಶ್ರೀಮಂತ ಚುಟುಕು ಕ್ರಿಕೆಟ್ ಟೂರ್ನಿ ಐಪಿಎಲ್ 2020ನ್ನೂ ಕೊರೊನಾ ವೈರಸ್ ನುಂಗಿ ಹಾಕಿದೆ. ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ಟೂರ್ನಿಯನ್ನು ಮುಂದೂಡಲಾಗಿದೆ.
ಈ ತಿಂಗಳ ಅಂತ್ಯದಲ್ಲಿ ಟೂರ್ನಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿತ್ತು. ಆದರೆ, ದೇಶದ ನಿದ್ದೆಗೆಡಿಸಿದ ಕೊರೊನಾ ಐಪಿಎಲ್-2020ರ ಟೂರ್ನಿಯನ್ನೇ ಮುಂದೂಡುವಂತೆ ಮಾಡಿದೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಮತ್ತು ಟೂರ್ನಿಯ ಅಧಿಕಾರಿಗಳು ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ ೨೯ಕ್ಕೆ ಆರಂಭಗೊಳ್ಳಬೇಕಿದ್ದ ಟೂರ್ನಿ ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ.
ಈ ಬಗ್ಗೆ ಎಲ್ಲಾ ಫ್ರಾಂಚೈಸಿ ತಂಡಗಳಿಗೂ ಮಾಹಿತಿ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ. ಆ ಮೂಲಕ ಒಂದು ಹಂತದಲ್ಲಿ ವೈರಸ್ ಹರಡದಂತೆ ದೇಶದಲ್ಲೆಡೆ ಕ್ರಿಕೆಟ್ ಮಂಡಳಿ ಎಚ್ಚರಿಕಾ ಕ್ರಮ ಕೈಗೊಂಡಿದೆ. ಇದರಿಂದಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಹಂತದಲ್ಲಿ ನಿರಾಸೆಯಾಗಿದ್ದರೂ ಕ್ರಿಕೆಟ್ ಮಂಡಳಿ ಕೈಗೊಂಡಿರುವ ನಿರ್ಧಾರವನ್ನು ಭಾರತೀಯರು ಸ್ವಾಗತಿಸಿದ್ದಾರೆ.