ನ್ಯೂಯಾರ್ಕ್, ಎ.07 (Daijiworld News/MB) : ಅಮೆರಿಕದ ಖ್ಯಾತ ಫುಟ್ ಬಾಲ್ ಆಟಗಾರ ಮತ್ತು 1970ರಿಂದ 2013ರವರೆಗೆ ಎನ್ಎಫ್ಎಲ್ ಇತಿಹಾಸದಲ್ಲಿ ಅತೀ ದೂರದಿಂದ ಫಿಲ್ಡ್ ಗೋಲ್ ಹೊಡೆದ ದಾಖಲೆ ಹೊಂದಿದ್ದ ಟಾಮ್ ಡೆಂಮ್ಸೆ ಅವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
73ರ ಹರೆಯದ ನ್ಐ ಓರ್ಲೆಯನ್ಸ್ ಸೈಂಟ್ಸ್ ಕಿಕರ್ ಖ್ಯಾತಿಯ ಡೆಂಮ್ಸೆ ಬುದ್ಧಿಮಾಂದ್ಯ ಮತ್ತು ಅಲ್ ಜೈಮರ್ ನಿಂದ ಬಳಲುತ್ತಿದ್ದು ಅವರಿಗೆ ಕೊರೊನಾ ಸೋಂಕು ದೃಡಪಟ್ಟ ನಂತರ ಹೋಮ್ ಕ್ಯಾರಂಟೈನ್ ಇರಿಸಲಾಗಿತ್ತು.
1970ರ ನವೆಂಬರ್ 8ರಂದು ನಡೆದ ಪಂದ್ಯದಲ್ಲಿ 63 ಯಾರ್ಡ್ ದೂರದಿಂದ ಅದ್ಭುತವಾಗಿ ಫೀಲ್ಡ್ ಗೋಲ್ ಹೊಡೆದಿರುವುದು ಅವರ ಎನ್ ಎಫ್ ಎಲ್ ಬಾಳ್ವೆಯ ಅತ್ಯಂತ ಶ್ರೇಷ್ಠ ಕ್ಷಣವಾಗಿದೆ. ಈ ಗೋಲಿನಿಂದಾಗಿ ಡೆಂಮ್ಸೆ ಅವರ ತಂಡವು ಗೆಲುವನ್ನು ದಾಖಲಿಸಿತ್ತು.
ಡೆಂಮ್ಸೆ ಅವರು ತನ್ನ ಬಲ ಪಾದ ಮತ್ತು ಬಲ ಕೈಯಲ್ಲಿ ಬೆರಳುಗಳಿಲ್ಲದೆ ಜನಿಸಿದ್ದು ವಿಶೇಷವಾಗಿ ಮಾರ್ಪಡಿಸಿದ್ದ ಬೂಟ್ನೊಂದಿಗೆ ಫುಟ್ಬಾಲ್ನಲ್ಲಿ ಶ್ಲಾಘನಾರ್ಹ ಸಾಧನೆ ಮಾಡಿದ್ದಾರೆ. ಆದರೆ ಕೆಲವರು ಈ ವಿಶೇಷ ಬೂಟ್ ಅವರಿಗೆ ಗೋಲು ಹೊಡೆಯಲು ಒಳ್ಳೆಯ ಅವಕಾಶ ಕಲ್ಪಿಸಿದೆ ಎಂದು ಕೆಲವರು ಟೀಕೆ ಮಾಡಿದ್ದರು.