ನವದೆಹಲಿ, ಮೇ 14 (DaijiworldNews/SM): ಐಸಿಸಿ ವಿಶ್ವಕಪ್ ಮುಗಿದು ಜುಲೈಗೆ ವರ್ಷ ಪೂರ್ತಿಯಾಗುತ್ತದೆ. ವಿಶ್ವಕಪ್ ನಲ್ಲಿ ಆಡಿರುವುದೇ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಧೋನಿಯವರ ಸದ್ಯದ ಕೊನೆಯ ಪಂದ್ಯವಾಗಿದೆ. ಆ ಬಳಿಕ ಕ್ರಿಕೆಟ್ ಮೈದಾನದಿಂದ ಮಹಿ ದೂರವಾಗಿದ್ದಾರೆ. ಅವರು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕಾಣಿಸುವುದು ಅನುಮಾನ ಎನ್ನಲಾಗುತ್ತಿದ್ದು, ಇದಕ್ಕೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹೇಳಿಕೆ ಮತ್ತಷ್ಟು ಪುಷ್ಟಿ ನೀಡಿದೆ.
ಮಹೇಂದ್ರ ಸಿಂಗ್ ಧೋನಿ ಮತ್ತೆ ತಂಡಕ್ಕೆ ಮರಳುವುದು ನಿಜಕ್ಕೂ ಕಷ್ಟದ ಕೆಲಸವಾಗಿದೆ. ಕಳೆದ ಒಂದು ವರ್ಷದಿಂದ ಅವರು ಕ್ರಿಕೆಟ್ ಆಡಿಲ್ಲ. ಹೀಗಾಗಿ ತಂಡಕ್ಕೆ ಮರಳುವ ಹಾದಿ ಸುಗಮವಾಗಿಲ್ಲ. ಅವರ ಸ್ಥಾನಕ್ಕೆ ಯುವ ಆಟಗಾರರು ಹೊಂದಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಮತ್ತೆ ಅವರಿಗೆ ಸ್ಥಾನವನ್ನು ಪಡೆದು ಸಾಮಾರ್ಥ್ಯ ಪ್ರದರ್ಶಿಸಲು ಅಂದುಕೊಂಡಷ್ಟು ಸುಲಭದ ಮಾತಲ್ಲ ಎಂದು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.
ಧೋನಿ ಅವರು ತುಂಬಾ ಫಿಟ್ ಆಗಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅವರೊಬ್ಬರು ಉತ್ತಮ ಮ್ಯಾಚ್ ಫಿನಿಷನ್. ಪಂದ್ಯದ ಗತಿಯನ್ನು ಬದಲಿಸಬಲ್ಲ ಸಾಮಾರ್ಥ್ಯ ಅವರಲ್ಲಿದೆ. ಆದರೆ ವಯಸ್ಸಾದಂತೆ ಕ್ರಿಯಾಶೀಲತೆ ಕಡಿಮೆಯಾಗುತ್ತದೆ. ಧೋನಿ 40ರ ಸನಿಹದಲ್ಲಿದ್ದು, ಅದು ಅವರಿಗೆ ಕಠಿಣವಾಗಬಹುದು. ಧೋನಿಯನ್ನು ಆಯ್ಕೆ ವಿಚಾರ ತಂಡದ ನಿರ್ವಹಣೆಗೆ ಬಿಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.