ನವದೆಹಲಿ, ಮೇ 22 (DaijiworldNews/SM): ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಒಂದಲ್ಲ ಒಂದು ವಿಚಾರಕ್ಕೆ ಕ್ರಿಕೆಟಿಗರಿಗೆ ಹಾಗೂ ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ. ಅದೇ ರೀತಿ ಮಾಜಿ ಆಟಗಾರ ಮಹಮ್ಮದ್ ಕೈಫ್ ಧೋನಿಯವರ ಅದ್ಬುತ ಪ್ರದರ್ಶನವೊಂದನ್ನು ನೆನಪಿಸಿಕೊಂಡಿದ್ದಾರೆ.
2005ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನೀಡಿದ್ದ ಪ್ರದರ್ಶನ ಅದ್ಭುತವಾಗಿತ್ತು ಎಂದಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 2005ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಏಕದಿನ ಪಂದ್ಯವೊಂದರಲ್ಲಿ ಎಂಎಸ್ ಧೋನಿ ಉತ್ತಮವಾಗಿ ಬ್ಯಾಟ್ ಬೀಸಿದ್ದರು. ಕೇವಲ123 ಎಸೆತಗಳಲ್ಲಿ 148 ರನ್ ಬಾರಿಸಿದ್ದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಅವಿಸ್ಮರಣೀಯ ಎಂದು ಮೊಹಮ್ಮದ್ ಕೈಫ್ ಸ್ಮರಿಸಿಕೊಂಡಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಅವರು, "ದೇವಧರ್ ಟ್ರೋಫಿಯಲ್ಲಿ ಆಡಿದ ಶೈಲಿಯನ್ನು ಮೊದಲ ಬಾರಿಗೆ ಗಮನಿಸಿದ ನನಗೆ ಧೋನಿಯಲ್ಲಿರುವ ಚಾಕಚಕ್ಯತೆ ತಿಳಿಯಿತು. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಎಂಟ್ರಿಯಾಗುವ ಮೊದಲು ಆಡಿದ ಪಂದ್ಯ ಅದಾಗಿತ್ತು. ಆ ಸಂದರ್ಭದಲ್ಲಿ ಧೋನಿಯವರಲ್ಲಿರುವ ವಿಭಿನ್ನ ಶೈಲಿಯನ್ನು ಅರಿತುಕೊಂಡೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.