ನವದೆಹಲಿ, ಮೇ 23 (DaijiworldNews/SM): ಕೊರೊನಾ ಅಟ್ಟಹಾಸದಿಂದಾಗಿ ಜಗತ್ತು ತಲ್ಲಣವಾಗಿದೆ. ಇದರಿಂದಾಗಿ ಕ್ರೀಡಾ ಚಟುವಟಿಕೆಗಳು ಸ್ತಬ್ದಗೊಂಡಿದೆ. ಈ ನಡುವೆ ಕ್ರಿಕೆಟ್ ಪಂದ್ಯಗಳನ್ನು ರದ್ದುಗೊಳಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಆದೇಶ ನೀಡಿತ್ತು. ಆದರೆ, ಇದೀಗ ಮತ್ತೆ ಪುನರಾರಂಭಕ್ಕೆ ಐಸಿಸಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸಮುದಾಯ, ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆರಂಭಿಸುವ ಗುರಿಯನ್ನು ಐಸಿಸಿ ಮಾರ್ಗಸೂಚಿಗಳು ಹೊಂದಿವೆ. ಸರಕಾರ ಹೊರಡಿಸಿರುವ ಕೆಲವೊಂದು ಮಾರ್ಗಸೂಚಿಗಳು ಈ ರೀತಿಯಲ್ಲಿವೆ:
ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ. ಐಸಿಸಿಯ ಮಾರ್ಗಸೂಚಿಯ ಪ್ರಾಥಮಿಕ ಪರಿಗಣನೆಯಲ್ಲಿ ಒಂದಾಗಿದೆ. ಎಲ್ಲಾ ಹಂತಗಳಲ್ಲಿ ಸರ್ಕಾರದ ನೀತಿ ನಿಯಮ ಪಾಲಿಸುವುದು ಕಡ್ಡಾಯವಾಗಿದೆ. ಸ್ಥಳೀಯ ಪ್ರಸರಣದಲ್ಲಿ ಹೆಚ್ಚಿನ ಸೋಂಕು ಅಥವಾ ಯಾವುದೇ ಅಪಾಯವಿಲ್ಲದಿದ್ದರೆ ಮಾತ್ರ ಕ್ರಿಕೆಟ್ ಆರಂಭಿಸಬಹುದು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಆಟದ ಮೈದಾನ, ತರಬೇತಿ ಸ್ಥಳ, ಬಟ್ಟೆ ಬದಲಾಯಿಸುವ ಕೊಠಡಿಗಳು, ಉಪಕರಣಗಳು, ಪಂದ್ಯದ ಮೊದಲು ಅಥವಾ ನಂತರ ಚೆಂಡಿನ ನಿರ್ವಹಣೆ ಎಲ್ಲವನ್ನು ಪರಿಶೀಲಿಸಿದ ಬಳಿಕವೇ ಪಂದ್ಯ ಆರಂಭಿಸಬೇಕೆಂದು ಸೂಚನೆ ನೀಡಲಾಗಿದೆ.