ಮುಂಬೈ, ಜೂ 06 (Daijiworld News/MSP): ಕೊರೊನಾ ಲಾಕ್ ಡೌನ್ ನಿಂದ ಕ್ರೀಡಾ ಜಗತ್ತು ಸ್ತಬ್ಧಗೊಂಡಿದ್ದರೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಆದಾಯವನ್ನು ಗಳಸಿದ್ದಾರೆ. ಈ ಅವಧಿಯಲ್ಲಿಇನ್ಸ್ಟಾಗ್ರಾಂನ ಪ್ರಾಯೋಜಿತ ಪೋಸ್ಟ್ಗಳ ಮೂಲಕ ಭರ್ಜರಿ ಹಣ ಸಂಪಾದನೆ ಮಾಡುತ್ತಿರುವ ವಿಶ್ವದ ಅಗ್ರ 10 ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ ಟಾಪ್ 6ರಲ್ಲಿ ಸ್ಥಾನಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಾರ್ಚ್ 12ರಿಂದ ಮೇ14ರ ವರೆಗೆ ವಿರಾಟ್ ಕೊಹ್ಲಿ ಮೂರು ಪ್ರಾಯೋಜಿತ ವಿಡಿಯೋಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರತಿ ಪೋಸ್ಟ್ಗೆ ವಿರಾಟ್ ಸರಿ ಸುಮಾರು 1.21 ಕೋಟಿಯಂತೆ ಆದಾಯಗಳಿಸಿದ್ದಾರೆ. ಒಟ್ಟಾರೆಯಾಗಿ 3.65 ಕೋಟಿ ರೂಪಾಯಿಯನ್ನು ಮನೆಯಲ್ಲಿ ಕುಳಿತೇ ಜೇಬಿಗಿಳಿಸಿದ್ದಾರೆ ವಿರಾಟ್ ಕೊಹ್ಲಿ. ಹಾಗೆಂದು ಸ್ಟಾರ್ ಕ್ರೀಡಾಪಟುಗಳು ಇನ್ಸ್ಟಾಗ್ರಾಂನಿಂದ ಎಲ್ಲ ವೈಯಕ್ತಿಕ ಪೋಸ್ಟ್ಗಳಿಗೂ ಹಣ ಸಂಪಾದಿಸುವುದಿಲ್ಲ. ಇದು ಪ್ರಾಯೋಜಿತ ಪೋಸ್ಟ್ಗಳಿಗೆ ಮಾತ್ರ ಅನ್ವಯಿಸುತ್ತದೆ. ಯಾವ ಉತ್ಪನ್ನ ಅಥವಾ ಬ್ರಾಂಡ್ ಬಗ್ಗೆ ಪೋಸ್ಟ್ ಮಾಡುತ್ತಾರೋ ಆ ಕಂಪನಿಯಿಂದ ಕ್ರೀಡಾಪಟುವಿಗೆ ಹಣ ಸಂದಾಯವಾಗುತ್ತದೆ.
ಲಾಕ್ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ಆದಾಯಗಳಿಸಿದವರ ಪಟ್ಟಿಯಲ್ಲಿ ಪೋರ್ಚುಗಲ್ನ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ (₹17.28 ಕೋಟಿ) ಮೊದಲ ಸ್ಥಾನದಲ್ಲಿದ್ದಾರೆ. ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ (₹ 11.52 ಕೋಟಿ ) ಮತ್ತು ನೇಮರ್ (₹ 10.56 ಕೋಟಿ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂ ಖಾತೆಯಲ್ಲಿ 62.2 ಮಿಲಿಯನ್ ಫಾಲೋವರ್ಸ್ಅನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಚಟುವಟಿಕೆಯಿಂದಿರುವ ಕೊಹ್ಲಿ ವಿಶ್ವಾದ್ಯಂತ ಇರುವ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡಿದ್ದಾರೆ.