ಭುವನೇಶ್ವರ, ಜು 14 (DaijiworldNews/PY): ಒಲಿಂಪಿಕ್ಸ್ ಮುಂದೂಡಿರುವ ಕಾರಣ ತರಬೇತಿಯನ್ನು ಮುಂದುವರಿಸಲು ಭಾರತದ ಓಟಗಾರ್ತಿ ದ್ಯುತಿ ಚಂದ್ ಅವರು ತಮ್ಮ ಬಳಿ ಇದ್ದ ಬಿಎಂಡಬ್ಲ್ಯೂ ಕಾರನ್ನು ಮಾರಾಟ ಮಾಡಲು ತೀರ್ಮಾನಿಸಿದ್ದಾರೆ.
ತಮ್ಮ ತರಬೇತಿಯನ್ನು ಮುಂದುವರಿಸುವ ಕಾರಣದಿಂದ ಕಾರನ್ನು ಮಾಡಲು ನಿರ್ಧರಿಸಿದ್ದ ಇವರು ಕಾರು ಮಾರಾಟ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು.
ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದ ಅವರು, ನಾನು ಭುವನೇಶ್ವರದಲ್ಲಿ ತರಬೇತಿ ಪಡೆಯುತ್ತಿದ್ದು, ತರಬೇತಿಗೆಂದು ಸರ್ಕಾರ ಹಾಗೂ ಪ್ರಯೋಜಕರು ನೀಡಿದ್ದ ಹಣ ಮುಗಿದಿದೆ. ಹಾಗಾಗಿ ತರಬೇತಿ ಮುಂದುವರೆಸುವ ನಿಟ್ಟಿನಲ್ಲಿ ನನ್ನ ಕಾರನ್ನು ಮಾರಾಟ ಮಾಡಬೇಕು ಎಂದು ತೀರ್ಮಾನಿಸಿದ್ದೇನೆ. ಕಾರನ್ನು ಯಾರಾದರೂ ಖರೀದಿ ಮಾಡುವವರು ಇದ್ದರೆ ನನಗೆ ಸಂದೇಶದ ಮೂಲಕ ತಿಳಿಸಿ ಎಂದಿದ್ದರು.
ದ್ಯುತಿ ಚಂದ್ ಅವರು 2015ರಲ್ಲಿ ಬಿಎಂಡಬ್ಲ್ಯೂ ಮಾಡೆಲ್ ಕಾರನ್ನು 40 ಲಕ್ಷ. ರೂ.ಗೆ ಖರೀದಿ ಮಾಡಿದ್ದರು.
ಫೇಸ್ಬುಕ್ನಲ್ಲಿ ದ್ಯುತಿ ಚಂದ್ ಅವರು ಪೋಸ್ಟ್ ಮಾಡಿದ ನಂತರ ದ್ಯುತಿ ಚಂದ್ ಅವರ ನೆರವಿಗೆ ಒಡಿಶಾ ಸರ್ಕಾರ ಧಾವಿಸಿದ್ದು, ಇದರ ಪರಿಣಾಮ ಪೋಸ್ಟ್ ಅನ್ನು ದ್ಯುತಿ ಚಂದ್ ಅವರು ಡಿಲೀಟ್ ಮಾಡಿದ್ದಾರೆ.
ಈ ವಿಚಾರದ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಅವರು, ಸರ್ಕಾರವು ಟೋಕಿಯೋ ಒಲಿಂಪಿಕ್ ತರಬೇತಿಗಾಗಿ 50 ಲಕ್ಷ ರೂ. ಮಂಜೂರು ಮಾಡಿತ್ತು. ಕೋಚ್ ಸೇರಿದಂತೆ ಫಿಜಿಯೋಥೆರಪಿಸ್ಟ್, ಡಯಟಿಷಿಯನ್ ಸೇರದಂತೆ ತಿಂಗಳಿಗೆ ಸುಮಾರು 5 ಲಕ್ಷ ರೂ ಖರ್ಚಾಗುತ್ತಿತ್ತು. ಪ್ರಸ್ತುತ ನಾನು ಟೋಕಿಯೋ ಒಲಿಂಪಿಕ್ಗೆ ಸಜ್ಜಾಗುತ್ತಿದ್ದು, ಜರ್ಮನಿಯಲ್ಲಿ ತರಬೇತಿ ಪಡೆಯಲು ಹಣದ ಅವಶ್ಯಕತೆ ಇದೆ. ಕೊರೊನಾದ ಪರಿಸ್ಥಿತಿಯಿಂದ ನನಗಾಗಿ ಖರ್ಚು ಮಾಡಲು ಯಾವುದೇ ಪ್ರಾಯೋಜಕರು ಸಿದ್ದವಿಲ್ಲ. ತರಬೇತಿ ಮುಂದುವರೆಸುವ ಕಾರಣಕ್ಕಾಗಿ ನಾನು ಕಾರು ಮಾರಾಟ ಮಾಡುವ ತೀರ್ಮಾನವನ್ನು ಕೈಗೊಂಡಿದ್ದೆ ಎಂದು ತಿಳಿಸಿದ್ದಾರೆ.
ದ್ಯುತಿ ಚಂದ್ ಅವರು 2020ರ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದರು. 2018ರ ಏಷ್ಯನ್ ಗೇಮ್ಸ್ನಲ್ಲಿ ಇವರು ಎರಡು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದರು. ಲಾಕ್ಡೌನ್ ಕಾರಣದಿಂದ ತರಬೇತಿಯನ್ನು ಅರ್ಧಕ್ಕೆ ನಿಲ್ಲಿಸಿದ್ದ ಇವರು ಮೇ ರಿಂದ ತರಬೇತಿಯನ್ನು ಪುನಃ ಆರಂಭಿಸಿದ್ದಾರೆ.
ಕೊರೊನಾ ವೈರಸ್ ಕಾರಣದಿಂದ ಐಪಿಎಲ್ ಸೇರಿದಂತೆ ಹಲವು ಕ್ರೀಡೆಗಳು ಮುಂದೂಡಿಕೆಯಾಗಿದ್ದು, ಹಲವು ಟೂರ್ನಿಗಳು ಕೂಡಾ ರದ್ದಾಗಿವೆ. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್ ಕೂಡಾ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ.